Tuesday, October 26, 2021

ಕರ್ತವ್ಯ ಮರೆತು ಕಿತ್ತಾಟದಲ್ಲಿ ನಿರತರಾದ ಸಿದ್ದರಾಮಯ್ಯ-ಕುಮಾರಸ್ವಾಮಿ

Must read

ಕಾಂಗ್ರೆಸ್‌ ಎಚ್ಚೆತ್ತುಕೊಳ್ಳದೇ ಹೋದರೆ ಸಿದ್ದರಾಮಯ್ಯ ಅವರೇ ಆ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಕುಮಾರಸ್ವಾಮಿಯವರ ಇಂತಹಾ ಹಲವು ಆರೋಪಗಳಿಗೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಏನೂ ಸುಮ್ಮನೆ ಕೂತಿಲ್ಲ, ಅವರೂ ತಿರುಗೇಟನ್ನು ಬಹಳ ಖಡಕ್​ ಆಗಿ ಕೊಟ್ಟಿದ್ದಾರೆ ಬಿಡಿ.. ಜನರಿಗೆ ಕೊಟ್ಟ ಸಂದೇಶವೇನು ಅನ್ನೋದನ್ನ ವೈಯಕ್ತಿಕವಾಗಿ ಅವರೇ ವಿಮರ್ಶೆಗೊಳಪಡಿಸುವುದು ಒಳಿತು. ಅದು ಬಿಟ್ಟು ವಿಚಾರಕ್ಕೆ ಬರುವುದಾದರೆ.

ಬಿಡದಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ‘ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಜೆಡಿಎಸ್‌ನಲ್ಲಿ ಇದ್ದುಕೊಂಡೇ, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿನ ಮುಖಂಡರನ್ನು ಸೇರಿಸಿಕೊಂಡು ‘ಅಹಿಂದ’ ಹೆಸರಿನಲ್ಲಿ ಸಂಘಟನೆ ಮಾಡಿದ್ದರು. ಈ ಮೂಲಕ ಜೆಡಿಎಸ್‌ ಅನ್ನೇ ಮುಗಿಸಲು ಹೊರಟಿದ್ದರು. ಈಗ ಮತ್ತೆ ಅದೇ ಕೆಲಸ ಆರಂಭಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮ ಕಾಂಗ್ರೆಸ್‌ನದ್ದೋ ಇಲ್ಲ ಅಹಿಂದ ವರ್ಗದ್ದೋ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚರ್ಚೆಗೆ ಬನ್ನಿ ಎಂಬ ಸಿದ್ದರಾಮಯ್ಯ ಅವರ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನ್ನ ತಂದೆ ನನಗೂ ರಾಜಕೀಯ ಕಳುಹಿಸಿದ್ದಾರೆ. ಪಲಾಯನ ಮಾಡುವುದಿಲ್ಲ. ನೀವು ಈ ಚರ್ಚೆಗೆ ಮಂಗಳ ಹಾಡಿದರೆ ನಾನೂ ಸುಮ್ಮನಿರುತ್ತೇನೆ. ಇಲ್ಲವಾದರೆ ಮಾತನಾಡಲು ನನಗೂ ಬಹಳಷ್ಟು ವಿಷಯಗಳಿವೆ’ ಎಂದರು. ಇನ್ನು ಡಿ.ಕೆ. ಶಿವಕುಮಾರ್ ಕುರಿತು ಉಗ್ರಪ್ಪ ಹೇಳಿಕೆ ಆಡಿಯೊ ಬಗ್ಗೆ ಪ್ರಸ್ತಾಪಿಸಿದ ಅವರು ‘ಸಿದ್ದರಾಮಯ್ಯ ಶಿಷ್ಯರೇ ಈ ಬಗ್ಗೆ ಮಾತನಾಡಿದ್ದು, ಇದರ ಹಿಂದೆ ಯಾವ ಉದ್ದೇಶ ಇದೆಯೋ ಗೊತ್ತಿಲ್ಲ. ಶಿವಕುಮಾರ್‌ ಒಮ್ಮೆಯಾದರೂ ಮುಖ್ಯಮಂತ್ರಿ ಆಗಬೇಕು ಎಂದು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಅವರನ್ನು ಮನೆಗೆ ಕಳುಹಿಸಿಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಇದೆಲ್ಲಾ ಚರ್ಚೆಗಳು ತೀರಾ ವೈಯಕ್ತಿಕ. ಹೀಗ್ಯಾಕೆ ಇವರುಗಳು ವೈಯಕ್ತಿಕ ಚರ್ಚೆಗೆ ಇಳಿದು ಬಿಟ್ಟಿದ್ದಾರೋ, ಗೊತ್ತಿಲ್ಲ. ಚರ್ಚೆ ಆಗಬೇಕಾದ ಅದೆಷ್ಟೋ ಸಂಗತಿಗಳು ಇಂದು ಸದ್ದೇ ಇಲ್ಲದಂತಾಗಿವೆ. ಇಂತಹಾ ಹೊತ್ತಲ್ಲಿ ಇವರುಗಳು ನಡೆದುಕೊಳ್ಳುವ ರೀತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಜನ ಬೆಲೆ ಏರಿಕೆ ಬಿಸಿ ಇಂದಾಗಿ ಸಾಯುತ್ತಿದ್ದಾರೆ. ಸಿಲಿಂಡರ್​ ಗ್ಯಾಸ್​ ದರ, ಪೆಟ್ರೋಲ್​-ಡೀಸೆಲ್​ ದರ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಚರ್ಚೆ ಮಾಡಬೇಕಾದ ಸಂಗತಿಗಳು ಇವೆಲ್ಲವೂ. ಪ್ರತಿಭಟಿಸಬೇಕಾದ ವಿಷಯಗಳು ಇವೆಲ್ಲವೂ.. ಬಟ್​ ಪ್ರತಿಪಕ್ಷ ನಾಯಕರು, ಪರಸ್ಪರ ಕಿತ್ತಾಟದಲ್ಲಿ ನಿರತರಾಗಿದ್ದಾರೆ.

Also read:  ಐಟಿ ದಾಳಿ ಮತ್ತು ಉಳಿದು ಹೋದ ಗೊಂದಲಗಳು..!

More articles

Latest article