ಮೈಸೂರು: ನಟಿ ರಮ್ಯಾ ಅಶಿಸ್ತು, ಉದ್ಧಟತನ ತೋರಿದ್ದಾರೆ. ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ರಮ್ಯಾರವರನ್ನು ಕರೆದು ವಿವರಣೆ ಕೇಳುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಚೌಕಟ್ಟಿನೊಳಗೆ ಕರೆದು ಬಗೆಹರಿಸಿಕೊಳ್ಳುತ್ತೇವೆ. ಮಹಮದ್ ನಲಪಾಡ್ ಆಗಲಿ, ನಾನಾಗಲಿ, ಯಾರೇ ಆಗಲಿ ಪಕ್ಷದ ವಿರುದ್ಧ ನಡೆದರೆ ಅದು ಅಶಿಸ್ತು ಎಂದಿದ್ದಾರೆ.
ಇನ್ನು ರಮ್ಯಾ ಸಂಸದರಾಗಿದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದಿತ್ತು. ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು, ರಾಜ್ಯ ಉಸ್ತುವಾರಿಗಳ ಗಮನಕ್ಕೆ ತರಬಹುದಿತ್ತು. ಅವರು ಪಕ್ಷದ ಚೌಕಟ್ಟನ್ನು ಮೀರಬಾರದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.