ಶಿವಮೊಗ್ಗ: ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಸರ್ಕಾರಕ್ಕೆ ಏನು ತೊಂದರೆ ಇಲ್ಲ. ಕಾಂಗ್ರೆಸ್ಗೆ ಅದು ತಿರುಗುಬಾಣ ಆಗುತ್ತದೆ. ಬಿಜೆಪಿಗೆ ಲಾಭವಾಗುತ್ತೇ ಹೊರತು ನಷ್ಟವಾಗಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ 75 ವರ್ಷ ಆಗುತ್ತಿದೆ. ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರು ರಾಜ್ಯ ಹಾಗೂ ರಾಷ್ಟ್ರದ ಕೆಲಸ ಮಾಡಲಿ. ಆದರೆ ಧರ್ಮ ದ್ರೋಹದ ಕೆಲಸ, ರಾಷ್ಟ್ರದ್ರೋಹಿಗಳಿಗೆ ಅವರು ಬೆಂಬಲ ನೀಡಬಾರದು. ಈ ಬಗ್ಗೆ ಸಿದ್ದರಾಮಯ್ಯನವರಿಗೆ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಗೊಂದಲ ಇದೆ. ಡಿಕೆಶಿ ಬಣ, ಸಿದ್ದು ಬಣ ಎಂದಿದೆ. ಎಂ.ಬಿ.ಪಾಟೀಲ್ ಸಹ ಸಿಎಂ ಸ್ಥಾನ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ಮುಖ್ಯಮಂತ್ರಿ ಸ್ಥಾನ ಇದೆ..? ಮೊದಲು ಇವರೆಲ್ಲರೂ ಗೆದ್ದು ಬರಬೇಕು. ಜನ ತೀರ್ಮಾನ ಮಾಡಬೇಕು. ಹೆಣ್ಣೇ ನಿಶ್ಚಯ ಅಗಿಲ್ಲ.. ಮದುವೆನೂ ಆಗಿಲ್ಲ..ಆಗಲೇ ಎಲ್ಲರೂ ಮಗುವಿಗೆ ನಾನೇ ಅಪ್ಪ ಅಂತಿದ್ದಾರೆ. ಇವರು ಭ್ರಮೆನಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.