ಶಿವಮೊಗ್ಗ: ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ ಎಂದು ನಾನು ಅವತ್ತೇ ಹೇಳಿದ್ದೆ. ಸಿದ್ದರಾಮಯ್ಯರ ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಬಗ್ಗೆ ಟೀಕೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂತೆಂಥಾ ಸಂದರ್ಭದಲ್ಲಿ ದೇಶಕ್ಕಾಗಿ ಮೋದಿ ಸೇವೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿರುವುದು ಪ್ರಧಾನಿ ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಟೀಕೆಗೆ ಬೆಲೆ ಇಲ್ಲ. ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ ಎಂದರು.
ಇನ್ನು ಜನರೇ ಕಾಂಗ್ರೆಸ್ನವರಿಗೆ ದೇಶದಲ್ಲಿ ಉತ್ತರ ಕೊಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಬೆಂಬಲಿತ ಮಹಾರಾಷ್ಟ್ರ ಸರ್ಕಾರಕ್ಕೂ ಔಷಧಿ ಸಿಗುತ್ತಿದೆ. ರಾಜ್ಯದಲ್ಲೂ ಕೂಡ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೂ ಪೂರ್ಣ ಔಷಧಿ ಕೊಟ್ಟು ಓಡಿಸುತ್ತಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಪತನವಾಗಲಿದೆ. ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.