Monday, November 29, 2021

ಕೃಷಿ ಸಚಿವರೇ ಹುಟ್ಟುಹಬ್ಬದಂದು ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ನಡೆಸುವ ಬದಲು ರೈತರ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆ

Must read

ಮಾನ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರ ಜನ್ಮದಿನದ ಅಂಗವಾಗಿ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸದ್ಯ ಕೃಷಿ ಸಚಿವರು ‘ರೈತರೊಂದಿಗೆ ಒಂದು ದಿನ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಇದು ಶ್ಲಾಘನೀಯವೂ ಹೌದು. ಆದರೆ, ಆ ಕಾರ್ಯಕ್ರಮಗಳ ಮೂಲಕ ರೈತರ ಜೀವನದಲ್ಲಿ ಆದ ಬದಲಾವಣೆಗಳಾದರೂ ಏನು..? ಎಂಬ ಪ್ರಶ್ನೆಗಳು ಮೂಡುವುದು ಸಹಜ.

ಏಕೆಂದರೆ, ಈ ಕಾರ್ಯಕ್ರಮದಿಂದ ಮಾನ್ಯ ಕ್ರಷಿ ಸಚಿವರು ರೈತರ ಸಮಸ್ಯೆಗಳನ್ನು ಎಷ್ಟು ಅರ್ಥ ಮಾಡಿಕೊಂಡರು..? ಎಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು..? ರೈತರ ಸಮಸ್ಯೆಗಳಲ್ಲಿ ಎಷ್ಟು ಬದಲಾವಣೆಗೆ ಈ ಕಾರ್ಯಕ್ರಮ ಕಾರಣವಾಯಿತು..? ಎಲ್ಲವೂ ಯಕ್ಷ ಪ್ರಶ್ನೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಬಸವರಾಜ್​ ಬೊಮ್ಮಾಯಿಯವರಿಗೆ ಪತ್ರ ಬರೆದು ಸಮೀಕ್ಷೆ ನಡೆಸುವಂತೆ ಸಲಹೆ ನೀಡಿದ್ದರು. ಪತ್ರದಲ್ಲಿ ರಾಜ್ಯಾದ್ಯಂತ ಅಕ್ಟೋಬರ್ ಅಂತ್ಯದ ವೇಳೆಗೆ 11.22 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ಆದರೆ, ಕೃಷಿ ಇಲಾಖೆಯ ಮಾಹಿತಿಗಳಲ್ಲಿ ಕಳೆದ ಒಂದೂವರೆ ತಿಂಗಳಿಂದ ಅತಿ ಹೆಚ್ಚು ಮಳೆ ಬಿದ್ದು ಹಾನಿಯಾಗಿರುವ ಜಿಲ್ಲೆಗಳ ಮಾಹಿತಿಯೆ ಇಲ್ಲ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯಸರ್ಕಾರ ಈವರೆಗೆ ಬೆಳೆ ಹಾನಿಗೆ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರವೂ ಕೂಡ ಸಮರ್ಪಕ ಪರಿಹಾರ ನೀಡುತ್ತಿಲ್ಲ. 2019-20, 2020-21ನೇ ವರ್ಷಗಳಲ್ಲಿ ಸುಮಾರು 1,5 ರಿಂದ 2 ಲಕ್ಷ ಕೋಟಿ ರೂ.ಗಳವರೆಗೆ ನಷ್ಟವಾಗಿತ್ತು. ಆದರೆ, ಕೇಂದ್ರ ಸರ್ಕಾರ 2019-20ರಲ್ಲಿ 1652.85, 2020-21 ರಲ್ಲಿ 1328.30 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಅಂದರೆ ಒಟ್ಟು ಬಿಡುಗಡೆ ಮಾಡಿದ ಹಣ ಕೇವಲ 2981.15 ಕೋಟಿ ರೂ. ಮಾತ್ರ. 2021-22ರ ನಷ್ಟಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲ. ಕೇಂದ್ರ ಮತ್ತು ರಾಜ್ಯಗಳೆರಡೂ ಈ ಮಟ್ಟದ ನಿರ್ಲಕ್ಷ್ಯ ತೋರಿಸುವುದು ಅತ್ಯಂತ ಅಮಾನವೀಯ ನಡವಳಿಕೆಯಾಗುತ್ತದೆ. ಕೊರೊನಾದಿಂದ ಸಂಕಟದಲ್ಲಿರುವ ರೈತಾಪಿ ಸಮುದಾಯದಲ್ಲಿ ಆತ್ಮಹತ್ಯೆಗಳ ಪ್ರಮಾಣ ಮತ್ತೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

Also read:  ಆರ್​ಎಸ್​​ಎಸ್​ ವಿರುದ್ಧ ತಿರುಗಿ ಬಿದ್ದ ಹೆಚ್​ಡಿಕೆ-ಹೆಚ್​​ಡಿಕೆ ಹಿಂದೆ ಬಿದ್ದ ಮಾಧ್ಯಮ

ಆದರೆ,ಮಾನ್ಯ ಕೃಷಿ ಸಚಿವರು ಮಾತ್ರ ‘ರೈತರೊಂದಿಗೆ ಒಂದು ದಿನ’ ಎನ್ನುವ ಮೂಲಕ ಸಭೆ ಸಮಾರಂಭ ಹಾಗೂ ಫೋಟೋ ಶೂಟಿಂಗ್​ ಮಾಡಿಕೊಳ್ಳುತ್ತಾ ಅದನ್ನೇ ಒಂದು ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ಖೇದಕರ.

Latest article