Monday, November 29, 2021

ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಶುಭಕೋರಿ ಸಿಹಿ ತಿನ್ನಿಸುವ ಬದಲು ಭಾರತಕ್ಕೆ ದೀರ್ಘ ಆತ್ಮಾವಲೋಕನದ ಅವಶ್ಯಕತೆ ಇತ್ತು..!

Must read

ನವೆಂಬರ್​ 14 ಭಾರತದ ಪ್ರಥಮ ಪ್ರಧಾನ ಮಂತ್ರಿ ಚಾಚಾ ನೆಹರೂರವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಈ ವರ್ಷದ ಮಕ್ಕಳ ದಿನಾಚರಣೆಯಂದು ಭಾರತಕ್ಕೆ ಒಂದು ದೀರ್ಘ ಆತ್ಮಾವಲೋಕನದ ಅತ್ಯವಶ್ಯಕವಾಗಿತ್ತು.

ಎಲ್ಲರೂ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಶುಭಕೋರಿ ಸಿಹಿ ತಿನ್ನಿಸಿ, ತಮ್ಮ ಬೆನ್ನು ತಾವೇ ತಟ್ಟಿಕೊಂಡರು. ಆದರೆ, ಭಾರತದ ಭವಿಷ್ಯವಾಗಲಿರುವ ಮಕ್ಕಳು ಇಂದು ಹಸಿವು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ದೇಶದಲ್ಲಿರುವ ಇಂದಿನ ಸರ್ಕಾರಗಳಿಗೂ ಗೊತ್ತು. ಅಲ್ಲದೆ,  ಸರ್ಕಾರಿ ಶಾಲೆಗಳಿಗೆ ತೆರಳುತ್ತಿದ್ದ ಮಕ್ಕಳು ಕಳೆದ ಎರಡು ವರ್ಷಗಳಿಂದ ಶಾಲೆಯ ಮುಖವನ್ನೇ ಕಂಡಿರಲಿಲ್ಲ. ಅವರಿಗೆ ಇಂದಿಗೂ ಆನ್ಲೈನ್​ ಶಿಕ್ಷಣ ಏನು ಎನ್ನುವುದೇ ಗೊತ್ತಿಲ್ಲ ಕೂಡ. ಅನೇಕ ಮಕ್ಕಳು ಅಕ್ಷರಗಳನ್ನು ಗುರುತನ್ನೇ ಮರೆತು ಬಿಟ್ಟಿದ್ದಾರೆ. ಮುಖ್ಯವಾಗಿ ಒಂದರಿಂದ  ಐದನೇ ತರಗತಿಯವೆರೆಗಿನ ಮಕ್ಕಳ ಶಿಕ್ಷಣದ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಈ ಮಕ್ಕಳು ಅಕ್ಷರಗಳನ್ನು ಓದುವುದು ಹಾಗೂ ಬರೆಯುವುದನ್ನೇ ಮರೆತಿದ್ದಾರೆ ಎನ್ನುವ ಅನೇಕ ವರದಿಗಳೂ ಬಂದಿದ್ದವು ಕೂಡ. ಆದರೆ, ಸರ್ಕಾರಗಳು ಈ ಮಕ್ಕಳಿಗಾಗಿ ವಿಶೇಷವಾಗಿ ಮಾಡಿದ್ದಾದರೂ ಏನು..?

ಅಪೌಷ್ಟಿಕತೆ, ಹಸಿವಿನಿಂದ ಬಳಲಿದ್ದ ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳೇನು? ದೇಶದ ಮಕ್ಕಳು ಹಸಿವು, ಅಪೌಷ್ಟಿಕತೆಯಿಂದ ಬಳಲಿ ದುರ್ಬಲರಾಗುತ್ತಿದ್ದಾರೆಂದರೆ ದೇಶ ದುರ್ಬಲವಾಗುತ್ತಿದೆ ಎಂದರ್ತವಲ್ಲವೇ? ದೇಶದ ಮಕ್ಕಳು ಅಕ್ಷರವನ್ನು ಮರೆತಿದ್ದಾರೆ ಎಂದರೆ ಸಾಕ್ಷರತೆಯಲ್ಲಿ ದೇಶ ಹಿನ್ನಡೆ ಸಾಧಿಸಿದೆ ಎಂದರ್ತವಲ್ಲವೇ?. ಹಾಗಾದರೆ, ಸರ್ಕಾರಗಳು ಕೇವಲ ಶುಭಕೋರಿ ಮಕ್ಕಳ ಬಾಯಿ ಸಿಹಿ ಮಾಡಿದ್ದು ಸಾಕೆ? ಈ ಬಾರಿ ಮಕ್ಕಳ ದಿನಾಚರಣೆಯಂದು ಸರ್ಕಾರಗಳಿಗೆ ಒಂದು ದೀರ್ಘ ಆತ್ಮಾವಲೋಕನೆಯ ಅವಶ್ಯಕತೆ ಇತ್ತು. ಅದರಲ್ಲಿ ಸರ್ಕಾರಗಳು ವಿಫಲವಾಗಿವೆ ಎನ್ನುವುದು ಸ್ಪಷ್ಟ.

Latest article