Tuesday, October 26, 2021

ತುರ್ತಿಗೆ ಬಿದ್ದು ಸುಳ್ಳು ಹಬ್ಬಿಸಿದ ರಾಷ್ಟ್ರೀಯ ಮಾಧ್ಯಮಗಳು..!

Must read

ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ  ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ  ಎಂಬೆಲ್ಲಾ ಸುದ್ದಿಗಳು ಬಹುತೇಕ ನಿನ್ನೆಯ ದಿನ ಎಲ್ಲಾ ಮಾಧ್ಯಮಗಳೂ ವರದಿ ಮಾಡಿದ್ದವು. ಈ ವರದಿಗಳ ಮೂಲ, ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ, ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಹೀಗೆ ಸುದ್ದಿ ಪ್ರಕಟಿಸುತ್ತಿದ್ದಂತೆ ಜಿದ್ದಿಗೆ ಬಿದ್ದ ದೇಶದ ಬಹುತೇಕ ಮಾಧ್ಯಮಗಳು ಆ ವಾಹಿನಿಯ ಬ್ರೇಕಿಂಗ್​ಗಳನ್ನೇ ನಕಲಿಸಲು ತೊಡಗಿಕೊಂಡವು. ಯಾವುದೇ ರೀತಿಯ, ಸತ್ಯಾನ್ವೇಷಣೆಗೆ ತೊಡಗಿಕೊಳ್ಳಲೇ ಇಲ್ಲ. ಸುದ್ದಿಯ ಆಳ ಅಗಲಗಳನ್ನು ಪರಾಮರ್ಶಿಸಲು ಮುಂದಾಗದ ಮಾಧ್ಯಮಗಳು ಒಂದನ್ನೊಂದು ನಕಲಿಸುತ್ತಾ ದೇಶದ ಜನರನ್ನೇ ದಾರಿ ತಪ್ಪಿಸಲು ಮುಂದಾದವು..!

ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷೆ ನಡೆದಿದ್ದು, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐಗೆ ಸಲ್ಲಿಸಿದೆ. ಆದರೆ, ಮಕ್ಕಳಿಗೆ ಕೊವ್ಯಾಕ್ಸಿನ್‌ ಲಸಿಕೆ ನೀಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಮಾತುಕತೆ ನಡೆಯುತ್ತಿದೆ. ವಿಶ್ವದಲ್ಲೇ ಮೊದಲ ಬಾರಿಗೆ 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ  ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ ಎಂಬುದೆಲ್ಲಾ ಹಸಿ ಸುಳ್ಳು. 2-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಡಿಸಿಜಿಐ ಇನ್ನೂ ಅನುಮತಿ ನೀಡಿಲ್ಲ ಎಂದು  ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಖಾತೆ ಸಚಿವೆ ಡಾ. ಭಾರತಿ ಪ್ರವೀಣ್‌ ಸ್ಪಷ್ಟಪಡಿಸಿದ್ದಾರೆ. ದೊಡ್ಡವರಂತೆ ಮಕ್ಕಳಿಗೂ ಕೂಡ 2 ಡೋಸ್ ಕೊರೊನಾ​ ಲಸಿಕೆಯನ್ನು ನೀಡಲಾಗುತ್ತದೆ ಎಂದು ದೇಶದ ಬಹುತೇಕ ಮಾಧ್ಯಮಗಳು ವರದಿ ಪ್ರಸಾರ ಮಾಡಿದ್ದವು. ಆದರೆ, ಇದುವರೆಗೂ ಡಿಸಿಜಿಐ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂದು ಇದೀಗ ಕೇಂದ್ರದ ಸಚಿವೆಯೇ ಸ್ಪಷ್ಟಪಡಿಸಿದ್ದು, ಸುದ್ದಿ ಪ್ರಸಾರದ ತುರ್ತಿಗೆ ಬಿದ್ದು ವರದಿ ಭಿತ್ತರಿಸಿದ ರಾಷ್ಟ್ರೀಯ ಮಾಧ್ಯಮಗಳಿಗೆ ತೀವ್ರ ಮುಖಭಂಗವಾಗಿವೆ.

Also read:  ಐಟಿ ದಾಳಿ ಮತ್ತು ಉಳಿದು ಹೋದ ಗೊಂದಲಗಳು..!

More articles

Latest article