ವಿಜಯನಗರ: ಇತ್ತೀಚೆಗೆ ನಡೆದ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿದ್ದ ಆಮ್ ಆದ್ಮಿ ಪಕ್ಷದ ಒಬ್ಬರು ಹಾಗೂ ಎಂಟು ಜನ ಪಕ್ಷೇತರ ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲಿ 9 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಹೊಸಪೇಟೆ ನಗರಸಭೆಯ 35 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರು 12 ಸ್ಥಾನಗಳಲ್ಲಿ ಜಯಿಸಿದ್ದರು. ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ.
ಫಲಿತಾಂಶ ಹೊರಬಿದ್ದ ವಾರದಲ್ಲೇ 9 ಸದಸ್ಯರು ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಈಗ ಬಿಜೆಪಿಯ ಸಂಖ್ಯಾಬಲ 19ಕ್ಕೆ ಏರಿಕೆಯಾಗಿದ್ದು, ನಗರಸಭೆ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಆನಂದ್ ಸಿಂಗ್ ಇನ್ನೂ ಹಲವು ಸದಸ್ಯರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.