ವೈವಾಹಿಕ ಅತ್ಯಾಚಾರ ಎಂದರೇನು..? ಸದ್ಯ ಭಾರತದಲ್ಲಿ ಏಕೆ ಪ್ರಚಲಿತವಾಗಿದೆ..? ಗಂಡ ಹೆಂಡತಿಯೊಂದಿಗೆ ಬಲವಂತದ ಸಂಬಂಧ ಹೊಂದಿದರೆ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲವೇ..? ಇದನ್ನು ಒಂದು ಸಣ್ಣ ಘಟಿಸಿರುವ ಘಟನೆಯ ಉದಾಹರಣೆಯೊಂದಿಗೆ ತಿಳಿಯಲು ಪ್ರಯತ್ನಿಸೋಣ.
ಒಬ್ಬ ಯುವತಿ 2017ರಲ್ಲಿ ಮದುವೆಯಾಗಿದ್ದಳು, ಕೆಲವು ದಿನಗಳವರೆಗೆ ಎಲ್ಲವೂ ಚೆನ್ನಾಗಿ ನಡೆಯಿತು, ಆದರೆ ಆ ನಂತರ ಗಂಡ ಹೆಂಡತಿಯ ನಡುವೆ ಬಿರುಕು ಉಂಟಾಯಿತು. ವರದಕ್ಷಿಣೆಗಾಗಿ ಬೇಡಿಕೆ ಇಡುವಾಗ ಗಂಡ ತನ್ನನ್ನು ಹೊಡೆಯಲು ಮತ್ತು ನಿಂದಿಸಲು ಆರಂಭಿಸಿದ ಎಂದು ಪತ್ನಿ ಆರೋಪಿಸಿದ್ದಳು. ಪತಿ ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಬಲವಂತದ ಸಂಬಂಧವನ್ನು ಹೊಂದಿದ್ದರು. ಒತ್ತಾಯ ಪೂರ್ವಕ ಬಲವಂತದ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ಅತ್ತೆಯ ಮನೆ ಬಿಟ್ಟು ತಾಯಿಯ ಮನೆಗೆ ಹೊರಟು ಹೋದಳು.
ಇದಾದ ನಂತರ ಪತ್ನಿ ತನ್ನ ಗಂಡನ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಸಂಬಂಧಗಳು ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದಳು. ಈ ವಿಷಯವು ನ್ಯಾಯಾಲಯವನ್ನು ತಲುಪಿದಾಗ, ಕೆಳ ನ್ಯಾಯಾಲಯವು ಪತ್ನಿ ದಾಖಲಿಸಿದ್ದ ಎಲ್ಲಾ ಮೂರು ಪ್ರಕರಣಗಳಲ್ಲಿ ಪತಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿತು, ಆದರೆ ಹೈಕೋರ್ಟ್ನಲ್ಲಿ ಪತಿಯನ್ನು ಅತ್ಯಾಚಾರದ ಆರೋಪದಿಂದ ಮುಕ್ತಗೊಳಿಸಲಾಯಿತು. ತನ್ನ ಪತ್ನಿಯನ್ನು ಅತ್ಯಾಚಾರ ಮಾಡಿದ ಆರೋಪದಿಂದ ಪತಿ ಖುಲಾಸೆಯಾಗುತ್ತಿರುವುದು ಇದೇ ಮೊದಲೇನಲ್ಲ. ಭಾರತೀಯ ಕಾನೂನಿನಲ್ಲಿ ಪತಿ ಮತ್ತು ಪತ್ನಿಯರ ನಡುವಿನ ಈ ರೀತಿಯ ವೈವಾಹಿಕ ಅತ್ಯಾಚಾರವನ್ನು ಸೆಕ್ಷನ್ 375 ರಿಂದ ಹೊರಗಿಡಲಾಗಿದೆ.
ಛತ್ತೀಸ್ಗಢ ಹೈಕೋರ್ಟ್ ಕಳೆದ ವಾರ ಒಬ್ಬ ವ್ಯಕ್ತಿಯನ್ನು ತನ್ನ ಪತ್ನಿಯಿಂದ ಮಾಡಲಾಗಿದ್ದ ಅತ್ಯಾಚಾರ ಆರೋಪಗಳಿಂದ ಮುಕ್ತಗೊಳಿಸಿತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಗಂಡನ ಬಲವಂತದ ಸಂಭೋಗವು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅದು ಅತ್ಯಾಚಾರಕ್ಕೆ ಸಮವಲ್ಲ ಎಂದು ಹೇಳಿದೆ. ಮಹಿಳೆ ತನ್ನ ಪತಿಯ ಮೇಲೆ ಹಲವು ಬಾರಿ ಬಲವಂತದ ಅತ್ಯಾಚಾರ ಮತ್ತು ಅಸಹಜ ಲೈಂಗಿಕತೆಯ ಆರೋಪ ಮಾಡಿದ್ದಳು. ಆದಾಗ್ಯೂ ಸೆಕ್ಷನ್ 377 ರ ಅಡಿಯಲ್ಲಿ ಆರೋಪಿ ಪತಿಗೆ ಅಸ್ವಾಭಾವಿಕ ಲೈಂಗಿಕತೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಛತ್ತೀಸ್ಗಢ ಹೈಕೋರ್ಟ್ನ ಈ ನಿರ್ಧಾರದ ನಂತರ, ವೈವಾಹಿಕ ಅತ್ಯಾಚಾರದ ವಿಷಯವು ಮತ್ತೊಮ್ಮೆ ದೇಶದ ತುಂಬೆಲ್ಲಾ ಚರ್ಚೆಯಾಗುತ್ತಿದೆ.
ಕಳೆದ ತಿಂಗಳು ಕೇರಳ ಹೈಕೋರ್ಟ್ ಕೂಡ ಇದೇ ರೀತಿಯ ತೀರ್ಪು ನೀಡಿತ್ತು. ಆದಾಗ್ಯೂ ಕೇರಳ ಹೈಕೋರ್ಟ್ ವೈವಾಹಿಕ ಅತ್ಯಾಚಾರವನ್ನು ವಿಚ್ಛೇದನಕ್ಕೆ ಮಾನ್ಯ ಆಧಾರವೆಂದು ಪರಿಗಣಿಸಿತ್ತು.
ವೈವಾಹಿಕ ಅತ್ಯಾಚಾರದ ಬಗ್ಗೆ ಸರ್ಕಾರದ ನಿಲುವು ಏನು..?
ಮಾನವ ಹಕ್ಕುಗಳ ಕಾರ್ಯಕರ್ತರು ಬಹುಕಾಲದಿಂದ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೂ ಇದನ್ನು ಭಾರತದಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತಿಲ್ಲ. 2017ರಲ್ಲಿ ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು ಇದಕ್ಕೆ ಪ್ರತಿಕ್ರಯಿಸಿದ್ದ ಹೈಕೋರ್ಟ್, ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿಸುವುದು ಭಾರತೀಯ ಸಮಾಜದಲ್ಲಿ ವಿವಾಹ ವ್ಯವಸ್ಥೆಯನ್ನು "ಅಸ್ಥಿರಗೊಳಿಸಬಹುದು" ಎಂದು ಸ್ಪಷ್ಟನೆ ನೀಡಿತ್ತು. ಇಂತಹ ಕಾನೂನು ಪುರುಷರಿಗೆ ಕಿರುಕುಳ ನೀಡಲು ಪತ್ನಿಯರಿಗೆ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯ ಪಟ್ಟಿತು. 2019 ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಒಂದು ಸಂವಾದದ ಸಮಯದಲ್ಲಿ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ನಾನು ಪರಿಗಣಿಸುವುದಿಲ್ಲ. ಭಾರತದಲ್ಲಿ ಅಂತಹ ಕಾನೂನನ್ನು ತರುವ ಅಗತ್ಯವಿಲ್ಲ. ಇದು ನನ್ನ ವೈಯಕ್ತಿಕ ದೃಷ್ಟಿಕೋನ ಎಂದು ಅವರು ಹೇಳಿದ್ದರು.
ವೈವಾಹಿಕ ಅತ್ಯಾಚಾರ ಎಂದರೇನು..?
ಯಾವಾಗ ಗಂಡ ತನ್ನ ಹೆಂಡತಿಯ ಒಪ್ಪಿಗೆಯಿಲ್ಲದೆ ಒತ್ತಾಯ ಪೂರ್ವಕ ಬಲವಂತದ ದೈಹಿಕ ಸಂಬಂಧ ಹೊಂದುತ್ತಾರೋ ಅದನ್ನು ವೈವಾಹಿಕ ಅತ್ಯಾಚಾರ ಎಂದು ಕರೆಯಲಾಗುತ್ತದೆ. ವೈವಾಹಿಕ ಅತ್ಯಾಚಾರದಲ್ಲಿ ಪತಿ ಪತ್ನಿಯ ಮೇಲೆ ಯಾವುದೇ ರೀತಿಯ ಬಲ ಪ್ರಯೋಗಿಸುವುದಾಗಿರ ಬಹುದು, ಹೆಂಡತಿಯನ್ನು ಭಯಪಡಿಸುವ ದೈಹಿಕ ಸಂಪರ್ಕಗಳಾಗಿರ ಬಹುದು, ಅಥವಾ ಯಾವುದೇ ರೀತಿಯ ಶಾರೀರಿಕ ವಿರುದ್ಧ ಹೋಗುವ ಘಟನೆಯಾಗಿರ ಬಹುದು.
ಅನೇಕ ಕಾಲಾನಂತರದಲ್ಲಿ ಸಮಾಜಗಳಲ್ಲಿ ಮಹಿಳೆಯರ ಪಾತ್ರಗಳು ಮತ್ತು ಅವರ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಇದರೊಂದಿಗೆ ವೈವಾಹಿಕ ಅತ್ಯಾಚಾರವನ್ನು ಸಮಾಜದಲ್ಲಿ ಅಪರಾಧವೆಂದು ಪರಿಗಣಿಸಲು ಪ್ರಾರಂಭಿಸಿದೆ. 1932ರಲ್ಲಿ ಪೋಲಂಡ್ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಿದ ವಿಶ್ವದ ಮೊದಲ ದೇಶವಾಯಿತು. ಕಾಲಾನಂತರದಲ್ಲಿ ಪ್ರಪಂಚದ ಅನೇಕ ದೇಶಗಳು ಇದನ್ನು ಅಪರಾಧದ ವರ್ಗದಲ್ಲಿ ಸೇರಿಸಿಕೊಂಡಿವೆ. ಆದಾಗ್ಯೂ ಈ ದೇಶಗಳ ಪಟ್ಟಿಯಲ್ಲಿ ಭಾರತ ಇನ್ನೂ ಸೇರ್ಪಡೆಯಾಗಿಲ್ಲ ಏಕೆಂದರೆ ಈ ಕಾನೂನನ್ನು ಭಾರತ ಇನ್ನೂ ಅಳವಡಿಸಿಕೊಂಡಿಲ್ಲ.
ವೈವಾಹಿಕ ಅತ್ಯಾಚಾರದ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ..?
ಭಾರತದ ಕಾನೂನಿನ ಪ್ರಕಾರ ಅತ್ಯಾಚಾರದ ಆರೋಪಿಯು ಮಹಿಳೆಯ ಪತಿಯಾಗಿದ್ದರೆ, ಆತನ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ. ಐಪಿಸಿಯ ಸೆಕ್ಷನ್ 375ರಲ್ಲಿ ಅತ್ಯಾಚಾರವನ್ನು ವ್ಯಾಖ್ಯಾನಿಸಲಾಗಿದೆ, ಈ ಕಾನೂನು ವೈವಾಹಿಕ ಅತ್ಯಾಚಾರದಲ್ಲಿ ಒಂದು ವಿನಾಯಿತಿಯನ್ನು ನೀಡಿದೆ. ಪತ್ನಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿದ್ದರೆ, ತನ್ನ ಪತ್ನಿಯ ಜೊತೆಗಿನ ಒಪ್ಪಿಗೆ ಇಲ್ಲದ ದೈಹಿಕ ಸಂಪರ್ಕವನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳುತ್ತದೆ. ಈ ದೈಹಿಕ ಸಂಪರ್ಕವನ್ನು ಪುರುಷ ಬಲವಂತವಾಗಿ ಅಥವಾ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಬಯಸಿದರೂ ಸಹ, ಭಾರತೀಯ ಕಾನೂನಿನಲ್ಲಿ ಇಂತಹ ಕೃತ್ಯವನ್ನು ಕೇವಲ ದೈಹಿಕ ಮತ್ತು ಮಾನಸಿಕ ಹಿಂಸೆಯ ವ್ಯಾಪ್ತಿಯಲ್ಲಿ ಮಾತ್ರ ಪರಿಗಣಿಸಲಾಗುತ್ತದೆ.
ಹಾಗಾದರೆ ಭಾರತದಲ್ಲಿ ಮಹಿಳೆಯರಿಗೆ ತಮ್ಮ ಗಂಡಂದಿರ ದೌರ್ಜನ್ಯದ ವಿರುದ್ಧ ದೂರು ನೀಡುವ ಹಕ್ಕಿಲ್ಲವೇ?
ಹಿರಿಯ ಮಹಿಳಾ ವಕೀಲೆ ಅಭಾ ಸಿಂಗ್ ಹೇಳುವಂತೆ ಇಂತಹ ಕಿರುಕುಳಕ್ಕೆ ಬಲಿಯಾದ ಮಹಿಳೆಯರು ಪತಿಯ ವಿರುದ್ಧ ಸೆಕ್ಷನ್ 498 ಎ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಬಹುದು. ಇದರೊಂದಿಗೆ 2005 ರಲ್ಲಿ ಜಾರಿಗೆ ತಮದಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಗಂಡನ ದೌರ್ಜನ್ಯದ ವಿರುದ್ಧ ಪ್ರಕರಣ ದಾಖಲಿಸ ಬಹುದು, ಈ ಎರಡು ಕಾನೂನುಗಳಲ್ಲಿ ಮಹಿಳೆಯರು ತಮ್ಮ ಪತಿಯ ವಿರುದ್ಧ ಲೈಂಗಿಕ ಹಾಗೂ ದೌರ್ಜನ್ಯದ ಪ್ರಕರಣವನ್ನು ದಾಖಲಿಸಬಹುದು. ಇದರೊಂದಿಗೆ ಮಹಿಳೆಯರಿಗೆ ಗಾಯಗಳಾಗಿದ್ದರೆ ಅವರು ಐಪಿಸಿ ಸೆಕ್ಷನ್ ಅಡಿಯಲ್ಲಿಯೂ ಕೇಸ್ ದಾಖಲಿಸಬಹುದು.
ವೈವಾಹಿಕ ಅತ್ಯಾಚಾರವನ್ನು ಸಾಬೀತುಪಡಿಸುವುದು ದೊಡ್ಡ ಸವಾಲಾಗಿದೆ ಎಂದು ಅನೇಕ ನ್ಯಾಯಾಧಿಶರು, ಹಿರಿಯ ವಕೀಲರು ಹೇಳುತ್ತಾರೆ. ಗೋಡೆಗಳ ನಡುವೆ ನಡೆದ ಈ ಅಪರಾಧದ ಪುರಾವೆ ಪುಷ್ಟಿಕರಿಸುವುದು ತುಂಬಾ ಕಷ್ಟ ಎಂದು ಪೋಲಿಸರೂ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ನ್ಯಾಯ ಬಯಸುವ ಮಹಿಳೆಯರು ಪ್ರಕರಣ ದಾಖಲಿಸುವ ಮುನ್ನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, ಮೊದಲು ತಮ್ಮ ಗಂಡನಿಂದ ಎದುರಿಸುತ್ತಿರುವ ದೌರ್ಜ್ಯನ್ಯ ಸಾಬೀತು ಪಡಿಸುವ ನಿಟ್ಟಿನಲ್ಲಿ ಸಾಕ್ಷಿ ಕ್ರೋಢಿಕರಿಕೊಳ್ಳುವುದು ಉತ್ತಮ. ಇದರಿಂದ ನ್ಯಾಯ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಡೆದು ಬೇಗನೆ ನ್ಯಾಯ ಪಡೆಯ ಬಹುದಾಗಿದೆ.
ಪ್ರಸ್ತುತ ವಿಶ್ವದ ಎಷ್ಟು ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಅಪರಾಧವಾಗಿದೆ..?
19 ನೇ ಶತಮಾನದಲ್ಲಿ ಸ್ತ್ರೀವಾದಿ ಸ್ತ್ರೀ ಪುರುಷ ಸಮಾನತೆ ಪ್ರತಿಭಟನೆ ಅನೇಕ ಕ್ರಾಂತಿಗಳ ನಂತರವೂ, ವಿವಾಹಿತ ಪುರುಷರು ತಮ್ಮ ಪತ್ನಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಕಾನೂನುಬದ್ಧ ಹಕ್ಕನ್ನು ಹೊಂದಿದ್ದರು. ಇದು ಮಹಿಳೆಯರ ಹಕ್ಕನ್ನು ಹನನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು ಎನ್ನುವುದು ಮಹಿಳಾ ಸಮಾನತೆಗಾಗಿ ಶ್ರಮಿಸುತ್ತಿದ್ದ ಹೋರಾಟಗಾರರ ವಾದವಾಗಿತ್ತು.
1932ರಲ್ಲಿ ಪೋಲಂಡ್ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಿದ ವಿಶ್ವದ ಮೊದಲ ದೇಶವಾಯಿತು. 1970 ರ ಹೊತ್ತಿಗೆ, ಸ್ವೀಡನ್, ನಾರ್ವೆ, ಡೆನ್ಮಾರ್ಕ್, ಸೋವಿಯತ್ ಯೂನಿಯನ್, ಜೆಕೊಸ್ಲೊವಾಕಿಯಾ ದೇಶಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧವನ್ನಾಗಿಸಿದವು. 1976ರಲ್ಲಿ ಆಸ್ಟ್ರೇಲಿಯಾ ಮತ್ತು 1980ರಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಕೆನಡಾ ಮತ್ತು ಯುಎಸ್, ನ್ಯೂಜಿಲ್ಯಾಂಡ್, ಮಲೇಶಿಯಾ, ಘಾನಾ ಮತ್ತು ಇಸ್ರೇಲ್ ಸಹ ಈ ಪಟ್ಟಿಯಲ್ಲಿ ಸೇರಿಕೊಂಡವು.
ವಿಶ್ವಸಂಸ್ಥೆಯ ಪ್ರಗತಿಯ ವಿಶ್ವ ಮಹಿಳಾ ವರದಿಯ ಪ್ರಕಾರ, 2018 ರ ಹೊತ್ತಿಗೆ ವಿಶ್ವದ 185 ದೇಶಗಳಲ್ಲಿ 77 ದೇಶಗಳು ಮಾತ್ರ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸಲು ಸ್ಪಷ್ಟ ಕಾನೂನನ್ನು ಹೊಂದಿವೆ. ಉಳಿದ 108 ದೇಶಗಳಲ್ಲಿ 74 ದೇಶಗಳಲ್ಲಿ ಅತ್ಯಾಚಾರಕ್ಕಾಗಿ ಮಹಿಳೆಯರು ತಮ್ಮ ಗಂಡಂದಿರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಅವಕಾಶವಿದೆ. ಇನ್ನು 34 ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಅಪರಾಧವೂ ಅಲ್ಲ ಅಥವಾ ಮಹಿಳೆ ತನ್ನ ಗಂಡನ ವಿರುದ್ಧ ಅತ್ಯಾಚಾರಕ್ಕಾಗಿ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲು ಸಾಧ್ಯವಿಲ್ಲ. ಈ 34 ದೇಶಗಳಲ್ಲಿ ಭಾರತವೂ ಸೇರಿದೆ.
ಇದಲ್ಲದೇ ವಿಶ್ವದ 12 ದೇಶಗಳಲ್ಲಿ ಎಂತಹ ಕಾನೂನು ನಿಯಮಗಳಿವೆ ಎಂದರೆ, ಇಲ್ಲಿ ಅತ್ಯಾಚಾರ ಎಸಗಿದ ಅಪರಾಧಿ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಮದುವೆಯಾದರೆ, ಆತನನ್ನು ಆರೋಪಗಳಿಂದ ಮುಕ್ತಗೊಳಿಸಲಾಗುತ್ತದೆ. ಯುಎನ್ ಇದನ್ನು ಅತ್ಯಂತ ತಾರತಮ್ಯ ಮತ್ತು ಮಾನವ ಹಕ್ಕುಗಳ ವಿರುದ್ಧ ಪರಿಗಣಿಸುತ್ತದೆ.
ವರದಿ-ಸಂತೋಷ್ ರಾಥೋಡ್