Monday, November 29, 2021

ತರಕಾರಿ ಬೆಲೆಯಲ್ಲಿ ದಿಢೀರ್‌ ಏರಿಕೆ: ಟೊಮೇಟೊ ಬೆಲೆ ಕಡಿಮೆ ಯಾವಾಗ..?

Must read

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವು ಸಾಮಾನ್ಯರ ಬೆನ್ನುಮೂಳೆಯನ್ನು ಮುರಿಯುತ್ತಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಹಣದುಬ್ಬರದಿಂದ ಜನ ಕಂಗಾಲಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಬ್ರೇಕ್ ಬಿದ್ದ ಬಳಿಕ ಇದೀಗ ಟೊಮೇಟೊ ಬೆಲೆ ಗಗನ ಮುಟ್ಟಿದೆ. ದೇಶಾದ್ಯಂತ ಟೊಮೇಟೊ ಕೆಜಿಗೆ 100 ರೂಪಾಯಿಗೂ ಅಧಿಕ ಮಾರಾಟವಾಗುತ್ತಿದೆ. ಹಬ್ಬ ಹರಿದಿನಗಳು ಮುಗಿದ ನಂತರ ತರಕಾರಿಗಳ ಬೆಲೆ ಕಡಿಮೆಯಾಗಬಹುದೆಂದು ಜನರು ನಿರೀಕ್ಷಿಸಿದ್ದರು, ಆದರೆ ಇದಕ್ಕೆ ವಿರುದ್ಧವಾಗಿ, ಅವುಗಳ ಬೆಲೆ ಹೆಚ್ಚಾಗಲು ಪ್ರಾರಂಭಿಸಿವೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಅತಿವೃಷ್ಟಿಯಿಂದಾಗಿ ದಕ್ಷಿಣದ ಕೆಲವು ರಾಜ್ಯಗಳಲ್ಲಿ ಚಿಲ್ಲರೆ ಬೆಲೆ ಕೆಜಿಗೆ 120 ರೂಗೆ ಏರಿದೆ. ಟೊಮೆಟೊ ಚಿಲ್ಲರೆ ದರ ಚೆನ್ನೈನಲ್ಲಿ ಕೆಜಿಗೆ 100 ರೂ, ಪುದುಚೇರಿಯಲ್ಲಿ ಕೆಜಿಗೆ 90 ರೂ, ಬೆಂಗಳೂರಿನಲ್ಲಿ ಕೆಜಿಗೆ 150 ರೂಗೆ ಏರಿದೆ.

ಬೆಲೆ ಯಾವಾಗ ಕಡಿಮೆಯಾಗಲಿದೆ ಗೊತ್ತೇ..?

ಜನವರಿ-ಫೆಬ್ರವರಿ ವೇಳೆಗೆ ದೇಶದ ಜನರಿಗೆ ಟೊಮೆಟೊ ಬೆಲೆಯಲ್ಲಿ ಪರಿಹಾರ ಸಿಗುವ ನಿರೀಕ್ಷೆಯಿದೆ. ಸಗಟು ತರಕಾರಿ ವ್ಯಾಪಾರಿಗಳ ಪ್ರಕಾರ, ಅಕ್ಟೋಬರ್ 15 ರಂದು ಹೊಸ ಟೊಮೆಟೊ ನಾಟಿ ಮಾಡಲಾಗಿದ್ದು, ಇದು ಸಿದ್ಧವಾಗಲು ಕನಿಷ್ಠ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ಜನವರಿ-ಫೆಬ್ರವರಿ ವೇಳೆಗೆ ಟೊಮೇಟೊ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸೀಸನ್‌ನಲ್ಲಿ ಟೊಮೇಟೊ ದರ ಕೆಜಿಗೆ 20 ರಿಂದ 30 ರೂ ನಿರೀಕ್ಷಿಸಲಾಗಿತ್ತು. ಆದರೆ 100 ರೂಪಾಯಿಗೂ ಹೆಚ್ಚಿಗೆ ಮಾರಾಟವಾಗುತ್ತಿದೆ. ದಕ್ಷಿಣ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬರುತ್ತಿದ್ದರಿಂದ, ಈ ರಾಜ್ಯಗಳಲ್ಲಿ ಮಳೆಯಿಂದಾಗಿ ಬೆಳೆಗೆ ಸಾಕಷ್ಟು ಹಾನಿಯಾಗಿರುವುದೇ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಟೊಮೇಟೊ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ. ಮದುವೆ ಸೀಸನ್‌ ಆಗಿರುವುದರಿಂದ ಟೊಮೇಟೊಗೆ ಬೇಡಿಕೆ ಹೆಚ್ಚಿದ್ದು, ಬೆಲೆ ಏರಿಕೆಯಾಗಿರುವುದು ಇದಕ್ಕೆ ಮತ್ತೊಂದು ಕಾರಣ.ದಕ್ಷಿಣ ಭಾರತದಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಟೊಮೇಟೊ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಿದ್ದಾರೆ.

Latest article