ತುಮಕೂರು: ಹಾಲು ಖರೀದಿಸಲು ನಿರಾಕರಣೆ ಹಿನ್ನೆಲೆಯಲ್ಲಿ ಕೆಎಂಎಫ್ ಹಾಲಿನ ಡೈರಿ ಬಾಗಿಲಿಗೆ ಹಾಲು ಸುರಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಲಿನ ಡಿಕ್ರಿ ಸರಿಯಾಗಿ ಬರುತ್ತಿಲ್ಲ ಎಂಬ ಕಾರಣ ಹೇಳಿ ಗ್ರಾಮಸ್ಥರ ಬಳಿ ಹಾಲು ಖರೀದಿಸಲು ಕೆಎಂಎಫ್ ನಂದಿನಿ ಹಾಲಿನ ಕೇಂದ್ರ ಹಿಂದೇಟು ಹಾಕಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ನಿನ್ನೆ ಸಂಜೆ ಹಾಲಿನ ಕೇಂದ್ರದ ಬಾಗಿಲಿಗೆ ಹಾಲು ಸುರಿದು ಪ್ರತಿಭಟನೆ ನಡೆಸಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ನೀರಿನಾಂಶ ಹೆಚ್ಚಾಗಿದ್ದು, ಹಾಲಿನ ಡಿಕ್ರಿ ಸರಿಯಾಗಿ ಬರುತ್ತಿಲ್ಲ.
ಹಾಲನ್ನೇ ನಂಬಿಕೊಂಡು ಬದುಕುತ್ತಿರುವವರ ಬದುಕು ಏನಾಗಬೇಕು ಅಂತ ಕೆಎಂಎಫ್ ನಂದಿನಿ ಹಾಲಿನ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಕೂಡಲೇ ಹಾಲು ಖರೀದಿಸಿ ರೈತರಿಗೆ ಸಹಾಯ ಆಗುವಂತೆ ಮಾಡಬೇಕು ಅಂತ ಪಟ್ಟು ಹಿಡಿದಿದ್ದಾರೆ.