Sunday, October 2, 2022

‘ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನೋಕ್ಕಷ್ಟೇ ಲಾಯಕ್ಕು..’

Must read

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್​ನ ಟ್ವೀಟ್​ ಸಮರ ಮುಂದುವರೆದಿದೆ. ಕೆಲಸಕ್ಕೆ ಬಾರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನಲಷ್ಟೇ ಲಾಯಕ್ಕು ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿ ಟೀಕಿಸಿದೆ. ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ರಣಮಳೆಯಾಗುತ್ತಿದ್ದರೂ ಹೋಟೆಲ್​ನಲ್ಲಿ ದೋಸೆ ಸವಿದ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ವಿಷಯವಾಗಿ ಕಾಂಗ್ರೆಸ್​ ಸೆಪ್ಟಂಬರ್​ 10ರಂದು ವಿನೂತನವಾಗಿ ಪ್ರತಿಭಟನೆ ನಡೆಸಿ, 10 ಬಗೆಯ ವಿವಿಧ ದೋಸೆಗಳನ್ನ ಸಂಸದರ ಕಚೇರಿಗೆ ಕಳುಹಿಸಿಕೊಟ್ಟಿದ್ದಾಗಿ ಹೇಳಿತ್ತು.

ಇದೇ ವಿಷಯವಾಗಿ ಟ್ವೀಟ್​ ಮಾಡಿದ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್​ನವರು ಮಸಾಲೆ ದೋಸೆ ಕಳುಹಿಸಿಕೊಟ್ಟಿದ್ದಾಗಿ ಹೇಳಿದ್ದಾರೆ. 24 ಗಂಟೆ ಕಳೆದರೂ ನಮ್ಮ ಮನೆಗಾಗಲಿ, ಕಚೇರಿಗಾಗಲಿ ದೋಸೆ ಪಾರ್ಸಲ್​ ಬಂದಿಲ್ಲ. ಎಂದಿನಂತೆ ಕಾಂಗ್ರೆಸ್​ ಈ ವಿಚಾರದಲ್ಲೂ ಮೋಸ ಮಾಡಿದೆ. ಸರಿಯಾಗಿ ದೋಸೆಯನ್ನೇ ಕಳುಹಿಸಲಾಗದ ಅವರು ಉತ್ತಮ ಆಡಳಿತ ಕೊಡುತ್ತಾರಾ ಎಂದು ವ್ಯಂಗ್ಯವಾಡಿದ್ದಾರೆ. ಈ ಟ್ವೀಟ್​ಗೆ ರೀ ಟ್ವೀಟ್​ ಮಾಡಿರುವ ಕಾಂಗ್ರೆಸ್​, ಬೆಳ್ಳಂದೂರಿನಲ್ಲಿ ಜನ ಮುಳುಗಿದರೆ ನಾನೇನು ಮಾಡಲಿ ಎನ್ನುವ ಕೆಲಸಕ್ಕೆ ಬಾರದ ಸಂಸದ ತೇಜಸ್ವಿ ನಿರುದ್ಯೋಗಿಯಾಗಿದ್ದಾರೆ. ಕಾಂಗ್ರೆಸ್​ ಕಳುಹಿಸಿದ ದೋಸೆಗಾಗಿ 24 ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟು ಒಬ್ಬ ಸಂಸದನಿಗೆ ಪುರುಸೊತ್ತಿದೆ ಎಂದಾದ್ರೆ ಅವರು ದೋಸೆ ತಿನ್ನೋಕ್ಕಷ್ಟೇ ಲಾಯಕ್ಕು. ಬಿಟ್ಟಿ ತಿನ್ನುವುದಷ್ಟೇ ಬಿಜೆಪಿ ಕಾಯಕ ಎಂದು ಕುಹುಕವಾಡಿದೆ.

=====

Latest article