Tuesday, May 17, 2022

ದಶಕಗಳ ಹೋರಾಟಕ್ಕೆ ಜಯ: ಶೆಟ್ಟಿಹಳ್ಳಿ-ಚಿತ್ರಶೆಟ್ಟಿ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಸಿಕ್ತು ಅನುಮತಿ

Must read

ಶಿವಮೊಗ್ಗ: ಶೆಟ್ಟಿಹಳ್ಳಿ, ಚಿತ್ರಶೆಟ್ಟಿ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಕೇಂದ್ರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಿಂದ 2ನೇ ಹಂತದ ಅನುಮತಿ ಸಿಕ್ಕಿದೆ. ಈ ಮೂಲಕ ಆರು ದಶಕಗಳ ಹೋರಾಟಕ್ಕೆ ಕೊನೆಗೂ ಬೆಳಕಿನ ಆಶಾಕಿರಣ ಸಿಕ್ಕಂತಾಗಿದೆ.

ಅಭಯಾರಣ್ಯದ ಒಳಗಿನ 2 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ಒಪ್ಪಿಗೆ ದೊರೆತಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಗೆ ಗ್ರಾಮಸ್ಥರು 1962ರಿಂದ ಈವರೆಗೆ ಕತ್ತಲ್ಲಲ್ಲೇ ಬದುಕು ನಡೆಸುತ್ತಿದ್ದರು. ಜಿಲ್ಲಾ ಕೇಂದ್ರದಿಂದ ಕೇವಲ 18 ಕಿ.ಮೀ ದೂರದಲ್ಲಿದ್ದರೂ ಈ ಗ್ರಾಮಗಳು ಸೌಲಭ್ಯ ವಂಚಿತವಾಗಿದ್ದವು.

ಲಿಂಗನಮಕ್ಕಿ ಡ್ಯಾಮ್​ ನಿರ್ಮಾಣದ ವೇಳೆ ಮುಳುಗಡೆಯಾಗಿ ಜನರು ಈ ಭಾಗದಲ್ಲಿ ನೆಲೆಸಿದ್ದರು. 1972ರಲ್ಲಿ ಈ ಪ್ರದೇಶ ವನ್ಯಜೀವಿ ವಲಯ ಎಂದು ಘೋಷಣೆಯಾಗಿ, ಸೌಲಭ್ಯದಿಂದ ವಂಚಿತರಾಗಿದ್ದರು. ಶೆಟ್ಟಿಹಳ್ಳಿ ಗ್ರಾಮಸ್ಥರು ಹಲವು ದಶಕದಿಂದ ವಿದ್ಯುತ್ ಸೌಲಭ್ಯ ನೀಡಲು ಮನವಿ ಮಾಡಿಕೊಂಡಿದ್ದರು. 2012ರಿಂದ ಯುಜಿ ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ನೀಡಲು ಹೋರಾಟ ಆರಂಭವಾಗಿತ್ತು. ಇದೀಗ 10 ವರ್ಷಗಳ ಬಳಿಕ ವಿದ್ಯುತ್ ಸೌಲಭ್ಯ ನೀಡಲು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ನೀಡಿದೆ.

13 ಕಿ.ಮೀ ಉದ್ದದ ಯುಜಿ ಕೇಬಲ್ ಅಳವಡಿಕೆಗೆ 0.69 ಹೆಕ್ಟೇರ್ ಭೂಮಿ ಬಳಸಿಕೊಳ್ಳಲು ಅನುಮತಿ ದೊರೆತಿದೆ. ಕೇಂದ್ರದ ಅನುಮತಿ ಬೆನ್ನಲ್ಲೇ ಮೆಸ್ಕಾಂನಿಂದ ಟೆಂಡರ್ ಪ್ರಕ್ರಿಯೆಗೆ ಸಿದ್ದತೆ ನಡೆಸಲಾಗಿದ್ದು, ಮೆಸ್ಕಾಂ ಕೇಂದ್ರ ಕಚೇರಿಗೆ 3.33 ಕೋಟಿ ರೂ.‌ನ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದೆ.

 

 

 

 

 

 

 

 

 

 

 

 

 

 

Latest article