ಹುಬ್ಬಳ್ಳಿ: ಜನಪ್ರಿಯ ರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಗುರು ಹಾಗೂ ಮಾಯಾ ಎನ್ನುವ ಹೆಸರಿನ ಎರಡು ಬೆಲ್ಜಿಯಂ ಶಫರ್ಡ್ ಶ್ವಾನಗಳನ್ನು ಭದ್ರತಾಪಡೆಗೆ ಸೇರ್ಪಡೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯು ಒಂದು ವರ್ಷದ ಬೆಲ್ಜಿಯಂ ಶೆಫರ್ಡ್ ನಾಯಿಗಳನ್ನು ತನ್ನ ಭದ್ರತಾ ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಬಲ ಹೆಚ್ಚಿದಂತಾಗಿದೆ. ಬೆಂಗಳೂರಿನಲ್ಲಿ ಸಿಆರ್ಪಿಎಫ್ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ಏಳು ತಿಂಗಳು ಈ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ತಳಿಯ ನಾಯಿಗಳು ಸ್ಫೋಟಕಗಳು ಮತ್ತು ಮಾದಕವಸ್ತುಗಳನ್ನು ವೇಗವಾಗಿ ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದಿವೆ.
‘ಗುರು’ ಶ್ವಾನಕ್ಕೆ ಮಾದಕ ದ್ರವ್ಯಗಳನ್ನು ಪತ್ತೆ ಮಾಡಲು ತರಬೇತಿ ನೀಡಲಾಗಿದ್ದು. ‘ಮಾಯಾ’ ಸ್ಫೋಟಕಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಚತುರತೆ ಹೊಂದಿದೆ ಎನ್ನಲಾಗಿದೆ.
ಭದ್ರತಾ ತಂಡದ ಶ್ವಾನದಳಕ್ಕೆ ಹೊಸ ತಳಿಗಳ ಸೇರ್ಪಡೆ ಸಮಯದಲ್ಲಿ ಭದ್ರತಾ ಪಡೆಯ ಮೂರನೇ ಬೆಟಾಲಿಯನ್ನ ಕಮಾಂಡೆಂಟ್ ಟಿ. ಫೈಜುದ್ದೀನ್, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಇನ್ಸ್ಪೆಕ್ಟರ್ ಮಹೇಶ ಹುದ್ದಾರ್, ಪಿಎಸ್ಐ ಹನುಮಂತ ಕರಿ, ಶ್ವಾನ ನಿರ್ವಹಣಾ ಅಧಿಕಾರಿಗಳಾದ ಮಹೇಶ ದೊಡ್ಡಮನಿ, ರಮೇಶ ಉಪ್ಪಾರ, ಫಕೀರಪ್ಪ ಹುಲ್ಲೂರು ಹಾಗೂ ಮಂಜುನಾಥ ಡಿ. ಉಪಸ್ಥಿತರಿದ್ದರು.