Thursday, January 27, 2022

ಕುವೆಂಪು ವಿವಿ ವಿರುದ್ಧ ದೂರಶಿಕ್ಷಣ ವಿದ್ಯಾರ್ಥಿಗಳ ಪ್ರತಿಭಟನೆ: ನಿನ್ನೆಯಿಂದ ಉಪವಾಸ ಹೋರಾಟ

Must read

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಹಾಗೂ ದೂರಶಿಕ್ಷಣ ವಿದ್ಯಾರ್ಥಿಗಳ ನಡುವಿನ ಜಟಾಪಟಿ ಮುಂದುವರಿದಿದ್ದು, ವಿಶ್ವವಿದ್ಯಾಲಯ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದನ್ನು ವಿರೋಧಿಸಿರುವ ದೂರ ಶಿಕ್ಷಣ ವಿದ್ಯಾರ್ಥಿಗಳು ಕುವೆಂಪು ವಿವಿ ಆವರಣದಲ್ಲಿ ನಿನ್ನೆಯಿಂದ ಉಪವಾಸ ಹೋರಾಟ ಆರಂಭಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಗಳು ಹಲವು ಬಾರಿ ಮನವಿ ಮಾಡಿದ್ದರೂ, ವಿವಿಯಿಂದ ಸಮರ್ಪಕ ಉತ್ತರ ದೊರಕದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಹಾದಿ ಹಿಡಿದಿರುವ ವಿದ್ಯಾರ್ಥಿಗಳು ಉತ್ತರ ದೊರಕುವವರೆಗೂ ಹೋರಾಟ ಮುಂದುವರೆಸಲು ನಿರ್ಧಾರ ಮಾಡಿದ್ದಾರೆ.

ಕಳೆದ 3 ವರ್ಷದಿಂದ ಗ್ರಹಣ ಹಿಡಿದಿದ್ದ ದೂರಶಿಕ್ಷಣ ಪರೀಕ್ಷೆಗಳಿಗೆ ಕುವೆಂಪು ವಿವಿ ತರಾತುರಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದ್ದು, ಜನವರಿ 03ರಿಂದ 19ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಿಗದಿ ಮಾಡಿದೆ.

ಸಾವಿರಾರು ವಿದ್ಯಾರ್ಥಿಗಳು 2019ರಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದರು. ಕೋವಿಡ್ ಕಾರಣದಿಂದ ಕುವೆಂಪು ವಿವಿ ಮೊದಲ ವರ್ಷದ ಪರೀಕ್ಷೆಯನ್ನು ಈವರೆಗೆ ನಡೆಸಿಲ್ಲ. 2019ರಿಂದ ಈವರೆಗೆ ಹಲವು ಬಾರಿ ಪರೀಕ್ಷೆಯ ಸುತ್ತೋಲೆ ಹೊರಡಿಸಿ, ಮತ್ತೆ ಮುಂದೂಡಿದ್ದರು. ಕೋವಿಡ್ ಕಾರಣಕ್ಕೆ ಇಂಟರ್ನಲ್ ಆಧಾರದ ಮೇಲೆ ತೇರ್ಗಡೆ ಮಾಡುವುದಕ್ಕೆ ವಿಶ್ವ ವಿದ್ಯಾಲಯದ ಅಧಿಕಾರಿಗಳು ಮುಂದಾಗಿದ್ದರು. ಈ ನಡುವೆ ವಿದ್ಯಾರ್ಥಿಗಳು ಕೂಡ ಕಾಲೇಜಿನ ಸೂಚನೆ ಹಿನ್ನೆಲೆಯಲ್ಲಿ 2ನೇ ವರ್ಷಕ್ಕೂ ಪ್ರವೇಶ ಪಡೆದಿದ್ದರು. ಈ   ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯದ ಏಕಾಏಕಿ ಶಾಕ್ ನೀಡಿದ್ದು, ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ. ಹೀಗಾಗಿ ಪ್ರತಿಭಟನೆ ಆರಂಭಿಸಿರುವ ವಿದ್ಯಾರ್ಥಿಗಳು ಕುವೆಂಪು ವಿಶ್ವ ವಿದ್ಯಾಲಯದ ನಿಗಧಿತ ಅವಧಿಯವರೆಗೆ ಪರೀಕ್ಷೆ ಮುಂದೂಡಬೇಕು ಅಥವಾ ನೇರ ತೇರ್ಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Latest article