Wednesday, May 18, 2022

ಮುಂಗಾರಿಗೂ ಮೊದಲೇ ತುಂಗಾ ಜಲಾಶಯ ಭರ್ತಿ

Must read

ಶಿವಮೊಗ್ಗ: ಯಾವುದೇ ಜಲಾಶಯಗಳಿರಲಿ ಮಳೆಗಾಲದಲ್ಲಿ ಭರ್ತಿಯಾಗುವುದನ್ನು ನೋಡಿದ್ದೇವೆ. ಆದರೆ ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಿಸಿಕೊಳ್ಳುವ ಶಿವಮೊಗ್ಗದ ಸಮೀಪವೇ ಇರುವ ತುಂಗಾ ಜಲಾಶಯ ಮುಂಗಾರಿಗೆ ಮುನ್ನವೇ ಭರ್ತಿಯಾಗಿದ್ದು, ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ.

ರಾಜ್ಯದಲ್ಲಿ ಅಷ್ಟೇ ಯಾಕೇ ಇಡೀ ದೇಶದಲ್ಲೇ ಇನ್ನೂ ಮುಂಗಾರು ಮಳೆಯೇ ಶುರುವಾಗಿಲ್ಲ. ಆದರೆ ಮುಂಗಾರು ಮಳೆಗೂ ಮುನ್ನವೇ ತುಂಗಾ ಜಲಾಶಯ ತುಂಬಿರುವುದು ಇತಿಹಾಸದಲ್ಲೇ  ಮೊದಲು.

ಶೃಂಗೇರಿ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರೋದ್ರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಗರಿಷ್ಠ 588.24 ಮೀಟರ್ ಎತ್ತರವಿರುವ ಈ ಡ್ಯಾಮ್‌ ಈಗಾಗಲೇ 588.11 ಮೀಟರ್‌ ಭರ್ತಿಯಾಗಿದೆ.

ಡ್ಯಾಮ್ ಭರ್ತಿಯಾಗಿರೋದ್ರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಸಾವಿರ ಕ್ಯೂಸೆಕ್ ನೀರನ್ನು ಪಕ್ಕದಲ್ಲೇ ಇರುವ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸರಬರಾಜು ಮಾಡಿ, ನಂತರ ನದಿಗೆ ಬಿಡಲಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನೇರವಾಗಿ ನದಿಗೆ ಬಿಡಲಾಗುತ್ತದೆ. ಹೀಗಾಗಿ ನದಿಪಾತ್ರದ ಜನರಿಗೆ ಜಾಗ್ರತೆಯಿಂದ ಇರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಲೆನಾಡು ಭಾಗದಲ್ಲಿ ಈ ವರ್ಷ ಮಳೆ ನಿಂತಿರುವ ಉದಾಹರಣೆಯೇ ಇಲ್ಲ. ಪ್ರತಿ ತಿಂಗಳೂ ಮಳೆಯಾಗುತ್ತಿದೆ. ಇದ್ರಿಂದ ಬೇಸಿಗೆ ಬೆಳೆಗೆ ಡ್ಯಾಮ್ ನೀರು ಬಳಕೆಯಾಗಿರಲಿಲ್ಲ. ಹೀಗಾಗಿ, ಈ ಬಾರಿ ನೀರು ಖಾಲಿಯಾಗಿರಲಿಲ್ಲ. ಈಗ ಏಪ್ರಿಲ್- ಮೇ ತಿಂಗಳಲ್ಲಿ ಸುರಿದ ಮಳೆಗೆ ಭರ್ತಿಯಾಗಿದೆ. ಈ ಮೂಲಕ ಮುಂಗಾರಿಗೆ ಮುನ್ನವೇ ಭರ್ತಿಯಾದ ಮೊದಲ ಡ್ಯಾಂ ಎಂಬ ಇತಿಹಾಸ ನಿರ್ಮಾಣ ಮಾಡಿದೆ.

ಕಳೆದ ಡಿಸೆಂಬರ್​ನಿಂದ ಇಂದಿನವರೆಗೂ ಮಲೆನಾಡಿನಲ್ಲಿ ನಿರಂತರವಾಗಿ ಮಳೆಯಾಗಿರುವ ಪರಿಣಾಮ ಈ ವರ್ಷ ಎಲ್ಲ ಕೆರೆಕಟ್ಟೆಗಳೂ ತುಂಬಿ ತುಳುಕುತ್ತಿವೆ. ಶಿವಮೊಗ್ಗ ನಗರಕ್ಕೆ ಜೀವಜಲ ಪೂರೈಕೆ ಮಾಡುವ ತುಂಗಾ ಡ್ಯಾಂ ಮುಂಗಾರಿಗೆ ಮುನ್ನವೇ ಈ ವರ್ಷ ಭರ್ತಿಯಾಗುವ ಮೂಲಕ ಇತಿಹಾಸ ನಿರ್ಮಿಸಿರುವುದು ನಿಜಕ್ಕೂ ವಿಶೇಷ.

Latest article