Saturday, July 2, 2022

ಇಂದು ಮತ್ತೆ ಮುಂಬೈಗೆ ಹಾರಲಿರುವ ರಮೇಶ್ ಜಾರಕಿಹೊಳಿ: ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ತರ್ತಾರಾ?

Must read

ಬೆಳಗಾವಿ: ಮಹಾರಾಷ್ಟ್ರದ ಅಘಾಡಿ ಸರ್ಕಾರದಲ್ಲಿ ಕ್ಷೀಪ್ರ ರಾಜಕೀಯ ಕ್ರಾಂತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಇಂದು ಮತ್ತೆ ಮುಂಬೈಗೆ ಹಾರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಯತ್ನ ನಡೆಸುತ್ತಿದ್ದು, ಅವರ ಜೊತೆಗೆ ಜಾರಕಿಹೊಳಿ ನಿಕಟ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇಂದು ದೇವೇಂದ್ರ ಫಡ್ನವಿಸ್ ಬುಲಾವ್ ಮೇರೆಗೆ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ತೆರಳಲಿದ್ದಾರೆ.

ನಾಲ್ಕು ದಿನಗಳ ಕಾಲ ಮುಂಬೈನಲ್ಲೇ ಉಳಿದಿದ್ದ ರಮೇಶ್ ಜಾರಕಿಹೊಳಿ, ವೈಯಕ್ತಿಕ ಕೆಲಸದ ಮೇಲೆ ನಿನ್ನೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಇದೀಗ ಮತ್ತೆ ಮುಂಬೈಗೆ ತೆರಳಲಿದ್ದಾರೆ. ಜಾರಕಿಹೊಳಿ ಮುಂಬೈ ಪ್ರವಾಸದ ಬಗ್ಗೆ ಅವರ ಆಪ್ತ ಮೂಲಗಳು ಖಚಿತಪಡಿಸಿವೆ. ಮಹಾರಾಷ್ಟ್ರದಲ್ಲಿ ಬಂಡಾಯದ ಲಾಭ ಪಡೆದು ಬಿಜೆಪಿ ಸರ್ಕಾರ ರಚನೆಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ ನೆರವಿಗೆ ನಿಂತಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಆಪ್ತರ ಬಳಿಯೂ ಗುಟ್ಟುಬಿಟ್ಟು ಕೊಡದ ಸಾಹುಕಾರ್, ಒಂದು ವಾರದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುತ್ತೆ ಎಂದಿದ್ದಾರೆ.

2018ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪತನಕ್ಕೆ ರಮೇಶ್‌ ಜಾರಕಿಹೊಳಿ ಅವರ ಬಂಡಾಯ ಕಾರಣವಾಗಿತ್ತು. ಆ ಬಳಿಕ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಈ ಸರ್ಕಾರದಲ್ಲಿ ಜಾರಕಿಹೊಳಿ ಸಚಿವ ಸ್ಥಾನ ಪಡೆದಿದ್ದರೂ ಸಿ.ಡಿ. ಪ್ರಕರಣದಿಂದಾಗಿ ಅನಿವಾರ್ಯವಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೀಗ ಸಿ.ಡಿ. ಪ್ರಕರಣದಲ್ಲಿ ಹೊರಬಂದು ಮತ್ತೊಮ್ಮೆ ಸಚಿವರಾಗಲು ಯತ್ನಿಸುತ್ತಿರುವ ಜಾರಕಿಹೊಳಿಗೆ ಫಡ್ನವಿಸ್‌ ಬೆನ್ನೆಲುಬಾಗಿ ನಿಂತಿದ್ದಾರೆ.

Latest article