ಬೆಂಗಳೂರು: ಬಿಜೆಪಿಯವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಉರಿಯೋ ಸೂರ್ಯನನ್ನ ಹಿಡಿಯೋಕೆ ಆಗಲ್ಲ. ಹರಿಯೋ ನೀರನ್ನ ತಡೆಯೋಕೆ ಆಗಲ್ಲ. ಇದನ್ನ ಅವರು ಅರ್ಥ ಮಾಡಿಕೊಂಡರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನರಿಗಾಗಿ ನಡೆಯಲು ಹೊರಟಿದ್ದೇವೆ. ವಾಕ್ ಫಾರ್ ವಾಟರ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ೯ರಿಂದ ೧೯ರವರೆಗೆ ಹಮ್ಮಿಕೊಂಡಿದ್ದೇವೆ. ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷ ಭೇದ ಮರೆತು ಎಲ್ಲರಿಗೆ ಆಹ್ವಾನಿಸಿದ್ದೇವೆ. ಸಂಘಟನೆಗಳು, ಸಂಸ್ಥೆಗಳನ್ನು ಆಹ್ವಾನಿಸಿದ್ದೇವೆ. ಎಲ್ಲರೂ ಅಭೂತ ಪೂರ್ವ ಬೆಂಬಲ ಕೊಟ್ಟಿದ್ದಾರೆ ಎಂದರು.
ಇನ್ನು ಒಂದು ಪಕ್ಷಕ್ಕೆ ಇದನ್ನು ತಡೆದುಕೊಳ್ಳೋಕೆ ಆಗ್ತಿಲ್ಲ. ಅವರಿಗೆ ಜಲಸ್ ಹೆಚ್ಚಾಗಿದೆ. ಏನಾದ್ರೂ ಮಾಡಿ ನಿಲ್ಲಿಸಬೇಕೆಂದು ಹೊರಟಿದ್ದಾರೆ. ಕೋವಿಡ್ ನೆಪದಲ್ಲಿ ನಿಲ್ಲಿಸೋಕೆ ಹೊರಟಿದ್ದಾರೆ. ಏಕಾಏಕಿ ಸೋಂಕಿನ ಪ್ರಕರಣ ಹೆಚ್ಚಳ ತೋರಿಸಿದ್ದಾರೆ. ವೀಕ್ ಎಂಡ್ ಕರ್ಪ್ಯೂ ಜಾರಿ ಮಾಡಿದ್ದಾರೆ. ಬೇರೆ ಕಾರ್ಯಕ್ರಮಗಳಿಗೂ ನಿರ್ಬಂಧ ವಿಧಿಸಿದ್ದಾರೆ. ನಾವೆಲ್ಲ ಕೂತು ಚರ್ಚೆ ಮಾಡಿದ್ದೇವೆ. ಕೋವಿಡ್ ನಿಯಮ ಅನ್ವಯಿಸಿ ರಾಜ್ಯದ ಜನರ ಹಿತಕ್ಕಾಗಿ ನಡಿಗೆ ಮಾಡ್ತೇವೆ. ರಾಜಕಾರಣ ಆಮೇಲೆ ಮಾಡೋಣ. ಜನರಿಗಾಗಿ ನೀರಿಗಾಗಿ ನಡಿಗೆ ಮಾಡುತ್ತೇವೆ. ಏನೇ ಆದರೂ ಜನವರಿ 9ರಂದು ಪಾದಯಾತ್ರೆ ನಡೆಯಲಿದೆ ಎಂದರು.