ಕಾರ್ಯಕರ್ತನಿಗೆ ಹೊಡೆದ ಡಿಕೆಶಿ : ರಾಜಕಾರಣಿಯೋ-ರೌಡಿಯೋ? ಎಂದ BJP

ಡಿ.ಕೆ ಶಿವಕುಮಾರ್​ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ..? ಬಿಜೆಪಿ ವ್ಯಂಗ್ಯ
ಕಾರ್ಯಕರ್ತನಿಗೆ ಹೊಡೆದ ಡಿಕೆಶಿ : ರಾಜಕಾರಣಿಯೋ-ರೌಡಿಯೋ? ಎಂದ BJP

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್​ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ..? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಎಂದು ರಾಜ್ಯ ಬಿಜಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಕಿಡಿಕಾರಿದೆ.

ಡಿ.ಕೆ ಶಿವಕುಮಾರ್​ ಮಾದೇಗೌಡರ ಆರೋಗ್ಯ ವಿಚಾರಿಸಲು ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಗೆ ತೆರಳಿದ್ದರು, ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಸಿಟ್ಟಾದ ಡಿಕೆ ಶಿವಕುಮಾರ್​, ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ರಾಜ್ಯ ಬಿಜೆಪಿ ಡಿ.ಕೆ ಶಿವಕುಮಾರ್​ ನಡೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

ಈ ಹಿಂದೆ ಕೂಡ ಸೆಲ್ಫಿ ತೆಗೆದುಕೊಳ್ಳಲು ಬಂದ ಕಾರ್ಯಕರ್ತರ ಮೇಲೆ ಡಿ.ಕೆ ಶಿವಕುಮಾರ್​ ಗರಂ ಆಗಿದ್ದರು. ಈ ಎಲ್ಲಾ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು, ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ..? ಎಂದು ಪ್ರಶ್ನಿಸಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆಗಳು ಇತ್ತೀಚೆಗೆ ಮಿತಿ ಮೀರುತ್ತಿದೆ. ನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ ಎಂದು ಇತ್ತೀಚೆಗೆ ಗದರಿಸಿದ್ದರು. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲ್​​ನ್ನ​​ ಕಿತ್ತೆಸೆಯುವುದು ಇದೆಲ್ಲ, ರೌಡಿ ಲಕ್ಷಣ ಅಲ್ಲದೆ ಮತ್ತೇನು..? ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಮೊದಲು ಅರಿತುಕೊಳ್ಳಬೇಕು. ಈ ಹಿಂದೆ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಮಹಾನಾಯಕ ಡಿಕೆಶಿಯವರೇ ಭೂಗತ ಜಗತ್ತಿನ ರೀತಿಯ ವರ್ತನೆಗಳು ನಿಮಗೆ ಅನಿವಾರ್ಯ ಎಂದಾದರೆ ಸಾರ್ವಜನಿಕ ಜೀವನ ಬಿಟ್ಟುಬಿಡಿ ಎಂದು ಆಗ್ರಹಿಸಿದೆ.

Related Stories

No stories found.
TV 5 Kannada
tv5kannada.com