ಯಾದಗಿರಿ: ರಾಜ್ಯದಲ್ಲಿ ಹಿಜಾಬ್, ಆಜಾನ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಹಿಜಾಬ್ನ ತಲೆ ಕಾಂಗ್ರೆಸ್ನದ್ದು, ದೇಹ ಮಾತ್ರ ಎಸ್ಡಿಪಿಐನದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ನಿಂದ ಅಶಾಂತಿಯ ಸೃಷ್ಟಿಯಾಗ್ತಿದೆ. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಷಡ್ಯಂತರ ಮಾಡ್ತಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದಾಗ, ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದ್ದಾಗ ಸಿದ್ದರಾಮಯ್ಯ ಅವರ ಮನೆಗೆ ಹೋಗಿಲ್ಲ. ಸಿದ್ದರಾಮಯ್ಯ ಕಣ್ಣೀರು ಹಾಕಲಿಲ್ಲ.
ಬೆಂಕಿ ಹಚ್ಚಿದ್ದವರು ಕಾಂಗ್ರೆಸ್ನ ಸಂಪತ್ ರಾಜ್. ಅವರ ಹಿಂದೆ ಕಾಂಗ್ರೆಸ್ ಇದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರು ಹತ್ಯೆಯಾದರು. ಆದರೆ, ಅವರಿಗೆ ಪರಿಹಾರ ಕೊಟ್ಟಿಲ್ಲ. ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನವರನ್ನು ಅರಬ್ಬಿ ಸಮುದ್ರಕ್ಕೆ ಕಳುಹಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ 10 ಸೀಟು ಗೆಲ್ಲುತ್ತಾರಾ ನೋಡಿ ಎಂದು ವಾಗ್ದಾಳಿ ನಡೆಸಿದರು.