ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್ ಗಲಾಟೆ ಕೈ-ಕೈ ಮಿಲಾಯಿಸುವ ಹಂತ ತಲುಪಿದೆ.
ಇಂದು ರಾಮನಗರ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮುಂದೆ ಡಿಕೆ ಡಿಕೆ ಎಂದು ಕೆಲವರು ಘೋಷಣೆ ಕೂಗಿದ್ದಾರೆ. ಜೊತೆಗೆ ದಲಿತ ಮುಖಂಡರು ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ, ಕಾರ್ಯಕ್ರಮಕ್ಕೆ ಸರಿಯಾಗಿ ಕರೆದಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಸರಿಯಾಗಿ ಆಹ್ವಾನ ನೀಡಿಲ್ಲವೆಂದು ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್ ಬೆಂಬಲಿಗರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಆಗಿದ್ದೇನು?
ನಂತರ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, ಯಾವುದೋ ನಾಲ್ಕು ಬೆಂಬಲಿಗರನ್ನು ಕರೆದುಕೊಂಡು ಬಂದು ಸ್ಟೇಜ್ ಮೇಲೆ ಕೂಗೋದಲ್ಲ. ಯಾರಪ್ಪ ಗಂಡು, ಕೆಲಸದಲ್ಲಿ ತೋರಿಸ್ರಲ್ಲೋ ಎಂದು ಕಿಡಿಕಾರಿದ್ದಾರೆ. ಈ ಹೇಳಿಕೆಯಿಂದ ಕೋಪಗೊಂಡ ಸಂಸದ ಡಿ.ಕೆ.ಸುರೇಶ್, ವೇದಿಕೆ ಮೇಲೆ ಅಶ್ವತ್ಥ್ ನಾರಾಯಣ್ ಅವರನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಕೈ-ಕೈ ಮಿಲಾಯಿಸುವ ಹಂತ ತಲುಪಿದೆ.