ಮೈಸೂರು: ಕೆಆರ್‌ಎಸ್ ಸುತ್ತಮುತ್ತ ಆತಂಕದ ವಾತಾವರಣ ಇರುವ ಬಗ್ಗೆ ಎಲ್ಲೆಡೆ ವರದಿ ಆಗುತ್ತಿದೆ. ಈಗ ಏನೂ ಆಗಿಲ್ಲ ಅಂದ್ರೆ ಸರಿ. ಹಾಗಂತ ಇನ್ನು 10 ವರ್ಷ ಬಿಟ್ಟು ಕೆಆರ್‌ಎಸ್ ಡ್ಯಾಂ ಒಡೆದರೆ ಪರವಾಗಿಲ್ವ. ಇನ್ನೂ 50 ವರ್ಷ ಬಿಟ್ಟು ಡ್ಯಾಂ ಒಡೆದರೆ ಓಕೆನಾ..? ಎಂದು ಮಂಡ್ಯ ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿ , ಸ್ಯಾನಿಟೈಸರ್ ಬಳಸಿ ಎನ್ನುತ್ತೇವೆ. ಹಾಗಂತ ನಮಗೆ ನಮಗೆ ಕರೊನಾ ಬಂದಿದೆ ಅಂತ ಅರ್ಥನಾ..? ಎಂದಿದ್ದಾರೆ.
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಅದನ್ನು ಬಯಲಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಈ ಪ್ರದೇಶದಲ್ಲಿ ಅಕ್ರಮ, ಸಕ್ರಮ ಅನ್ನುವ ಪ್ರಶ್ನೆಯೇ ಬರೋದಿಲ್ಲ. ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಡ್ಯಾಂನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ. ಸರ್ಕಾರವನ್ನಾಗಲೀ, ಮತ್ಯಾರನ್ನೋ ಆಗಲಿ ಚಾರ್ಜ್ ಮಾಡೋದು ನನ್ನ ಉದ್ದೇಶ ಅಲ್ಲ. ಆದರೆ ಅಕ್ರಮದ ಬಗ್ಗೆ ಹೋರಾಡುವ ಮನಸ್ಥಿತಿ ಇರುವ ಎಲ್ಲರ ಸಹಕಾರ ಕೇಳುತ್ತೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವವರೆಗೂ ಹೋರಾಟ ಮಾಡುತ್ತೇನೆ ಎಂದಿದ್ದಾರೆ.