ಬೆಂಗಳೂರು: ಅಂಬರೀಶ್ ತೀರಿಕೊಂಡಾಗ ಮಂಡ್ಯಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಬಾರದೆಂದು ಹೇಳಿದವರು, ಈಗ ಮಂಡ್ಯ ಜಿಲ್ಲೆ, ಅಂಬರೀಶ್ ಬಗ್ಗೆ ಚರ್ಚೆ ಮಾಡುತ್ತೀರಾ. ನಿಮಗೆ ನಾಚಿಕೆಯಾಗಬೇಕು. ಅಂಬರೀಶ್ರನ್ನ ಬದುಕಿದ್ದಾಗ ಯಾವ ರೀತಿ ನೋಡಿಕೊಂಡ್ರೋ ಗೊತ್ತಿಲ್ಲ. ಈಗ ಅಂಬರೀಶ್ ಬಗ್ಗೆ ಉಕ್ಕಿ ಹರಿಯುತ್ತಿದೆಯಾ.. ? ವಿಕ್ರಮ್ ಆಸ್ಪತ್ರೆಯಲ್ಲಿ ಹೇಗೆ ನಡೆದುಕೊಂಡರು ಅನ್ನೋದು ಗೊತ್ತಿದೆ ಎಂದು ಸಂಸದೆ ಸುಮಲತಾ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಮಂಡಲರಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಮಂಡ್ಯದಲ್ಲಿ ಏನು ಕೆಲಸ ಮಾಡಿದ್ದಾರೆ. ಜನ ಸತ್ತಾಗ ಇವರು ಹೋಗಲಿಲ್ಲ. ಈಗ ಕಲ್ಲು ಗಣಿಗಾರಿಕೆ ವೀಕ್ಷಿಸಲು ಹೋಗಿದ್ದಾರೆ. ಸಿನಿಮಾದಲ್ಲಿ ನಟಿಸಿದಂತೆ ಇಲ್ಲೂ ಮಾಡಬಹುದು ಅಂದುಕೊಂಡಿದ್ದಾರೆ. ನನ್ನ ಮುಂದಿನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದಿರಾ..? ಅಲ್ಲಿಂದಲೇ ಗೆಲವು ಪ್ರಾರಂಭ ಮಾಡುತ್ತೇನೆ ಎಂದು ಕುಮಾರಸ್ವಾಮಿ ಶಪಥ ಮಾಡಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣರನ್ನ ನೋಡಿ ಕುಮಾರಸ್ವಾಮಿ ಕಲಿಯಬೇಕು ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಕುಟುಂಬವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಹೊಡೆಯಲು ಬಂದವರು ಏನು ಆಗಿದ್ದಾರೆ ಅಂತ ಗೊತ್ತಿದೆ. ಅವರ ಸಂಸ್ಕೃತಿ ಏನು ಅಂತ ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.