ಜಿಎಸ್​ಟಿ ಅಡಿ ಪೆಟ್ರೋಲ್ ಬೆಲೆ 75, ಡೀಸೆಲ್ ಬೆಲೆ 68ಕ್ಕೆ ಇಳಿಕೆಯಾಗಲಿದೆಯೇ..?

ಏನಿರಲಿವೆ ಇದರ ಸಾಧಕ-ಬಾಧಕಗಳು..!
ಜಿಎಸ್​ಟಿ ಅಡಿ ಪೆಟ್ರೋಲ್ ಬೆಲೆ 75, ಡೀಸೆಲ್ ಬೆಲೆ 68ಕ್ಕೆ ಇಳಿಕೆಯಾಗಲಿದೆಯೇ..?
ಪೆಟ್ರೋಲ್, ಡೀಸೆಲ್ ತೆರಿಗೆಯನ್ನು ಜಿಎಸ್​ಟಿ ವ್ಯಾಪ್ತಿಗೆ ಒಳಪಡಿಸಲು ಇರುವ ತೊಡಕುಗಳೇನು..?
ದೇಶದಲ್ಲಿ ಇಂದು ಗಗನಕ್ಕೆ ಏರಿ ಜನರ ಸಾಮಾನ್ಯರ ಜೇಬು ಸುಡುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿರುವುದಕ್ಕೆ ಪ್ರಮುಖ ಕಾರಣ ಎಲ್ಲರಿಗೂ ಗೊತ್ತಿರುವುದೇ ಅದು ಕೇಂದ್ರ ಹಾಗೂ ರಾಜ್ಯಗಳು ಏರಿಸಿರುವ ತೆರಿಗೆಗಳಿಂದಾಗಿ. ಆದರೆ ಏರಿಕೆಯಾಗಿರುವ ಹೆಚ್ಚಿನ ತೆರಿಗೆಯಿಂದಾಗಿ ದುಬಾರಿಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಮೂಲಕ ಶೀಘ್ರವೇ ಪರಿಹರಿಸಬಹುದೆಂಬುದು ನಿಮಗೆ ಗೊತ್ತೇ..? . ಸರಕು ಮತ್ತು ಸೇವಾ ತೆರಿಗೆ (GST) ಮಂತ್ರಿಗಳ ಸಮಿತಿಯು ಈ ವಾರ ಪೆಟ್ರೋಲಿಯಂ ಉತ್ಪನ್ನಗಳನ್ನು ರಾಷ್ಟ್ರವ್ಯಾಪಿ ತೆರಿಗೆ ದರವನ್ನು ನಿಗದಿಪಡಿಸಲು ವಿಚಾರ ನಡೆಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಅವುಗಳ ಬೆಲೆಗಳು ಗರಿಷ್ಠ 28 ಪ್ರತಿಶತ ದರದಲ್ಲಿ ಗಮನಾರ್ಹವಾಗಿ ಇಳಿಕೆ ಕಾಣಲಿವೆ. ಆದರೆ ಇದರಿಂದಾಗಿ ಸರ್ಕಾರಗಳ ಆದಾಯವು ಗಮನಾರ್ಹವಾಗಿ ಕಡಿಮೆಯಾಗಲಿದೆ. ಆದ್ದರಿಂದಲೇ ಇದು ಕಗ್ಗಂಟಾಗಿ ಪರಿಣಮಿಸುತ್ತಿದೆ ಏಕೆಂದರೆ ರಾಜ್ಯ ಸರ್ಕಾರಗಳ ಪ್ರಮುಖ ಆದಾಯ ಪೆಟ್ರೋಲ್ ಮತ್ತು ಡೀಸೆಲ್ ಸುಂಕವೇ ಆಗಿರುವುದರಿಂದ ರಾಜ್ಯ ಸರ್ಕಾರಗಳು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಅದಕ್ಕೆ ಕೇಂದ್ರ ಸರ್ಕಾರದಿಂದ ಜಿಎಸ್​ಟಿ ಪಾವತಿ ಬಾಕಿಯೂ ಕೂಡ ಒಂದು ಪ್ರಮುಖ ಕಾರಣವಾಗಿದೆ.
ಇದೇ ಸೆಪ್ಟೆಂಬರ್ 17ರಂದು ಲಕ್ನೋದಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ನ 45ನೇ ಸಭೆಯಲ್ಲಿ ಪರಿಗಣನೆ.
ಇದೇ ಸೆಪ್ಟೆಂಬರ್ 17ರ ಶುಕ್ರವಾರ ಲಕ್ನೋದಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ನ 45 ನೇ ಸಭೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸಮಿತಿಯು ಪರಿಗಣಿಸಲಿದೆ. ಎರಡು ವರ್ಷಗಳ ಕೋವಿಡ್ ಪರಿಣಾಮದ ನಂತರ ಜಿಎಸ್‌ಟಿ ಮಂಡಳಿಯ ಮೊದಲ ಭೌತಿಕ ಸಭೆ ಇದಾಗಿದೆ. ಕೊನೆಯ ಸಭೆಯನ್ನು ಜೂನ್ 12 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿತ್ತು. ಇದರಲ್ಲಿ ಕೊರೊನಾವನ್ನು ತಡೆಗಟ್ಟುವ ಕುರಿತು ಮತ್ತು ಚಿಕಿತ್ಸೆ ನೀಡಲು ಬಳಸಿದ ಸರಕುಗಳ ತೆರಿಗೆ ದರವನ್ನು ಸೆಪ್ಟೆಂಬರ್ 30ರವರೆಗೆ ಕಡಿಮೆ ಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಜಿಎಸ್‌ಟಿ ಕುರಿತು ಮಂತ್ರಿಗಳ ಸಮಿತಿಯ ಅನುಮೋದನೆ ಅಗತ್ಯವಿದೆ.
ತಜ್ಞರ ಪ್ರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು, ಜಿಎಸ್‌ಟಿ ವ್ಯವಸ್ಥೆಯನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ ಜಿಎಸ್‌ಟಿ ಕುರಿತ ಮಂತ್ರಿಗಳ ಸಮಿತಿಯ ಮೂರು ನಾಲ್ಕಂಶ ಸದಸ್ಯರ ಅನುಮೋದನೆ ಬೇಕಾಗುತ್ತದೆ ಅಂದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಅನುಮೋದನೆ ಅಗತ್ಯವಾಗಿ ಬೇಕಾಗುತ್ತದೆ. ಹಾಗಾಗಿಯೇ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿದ್ದಾರೆ. ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿದ್ದೇ ಆದರೆ ರಾಜ್ಯಗಳ ಪ್ರಮುಖ ಆದಾಯದ ಮೂಲವು ಕೇಂದ್ರದ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಅವರ ವಾದವಾಗಿದೆ.
ಏಪ್ರಿಲ್-ಜುಲೈ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕೆಯ ಮೇಲೆ 48% ಹೆಚ್ಚು ಅಬಕಾರಿ ಸುಂಕ.
ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಂದರೆ ಏಪ್ರಿಲ್ ಮತ್ತು ಜುಲೈ ನಡುವೆ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು 48 ಪ್ರತಿಶತ ಹೆಚ್ಚಿಸಿದೆ. ಈ ಅವಧಿಯಲ್ಲಿ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಆದಾಯವನ್ನು ಸಂಗ್ರಹಿಸಿದೆ. ಇದು ಕಳೆದ ಹಣಕಾಸು ವರ್ಷದ ಅವಧಿಯಲ್ಲಿ 67,895 ಕೋಟಿ ರೂಪಾಯಿಯಾಗಿತ್ತು. 2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಸಂಗ್ರಹಿಸಿದ ತೆರಿಗೆಯಲ್ಲಿ 88 ಪ್ರತಿಶತದಷ್ಟು ಏರಿಕೆಯಾಗಿ 3.35 ಲಕ್ಷ ಕೋಟಿಗಳಿಗೆ ತಲುಪಿದೆ.
ಜಿಎಸ್‌ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್ 75 ರೂ, ಹಾಗೂ ಡೀಸೆಲ್ 68 ರೂಗೆ ಇಳಿಕೆ ಕಾಣಲಿದೆ.
ಪೆಟ್ರೋಲ್ ಮತ್ತು ಡೀಸೆಲ್​ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾದದ್ದೇ ಆದರೆ, ದೇಶಾದ್ಯಂತ ಪೆಟ್ರೋಲ್ ಬೆಲೆ 75 ರೂ.ಗೆ ಇಳಿಕೆಯಾಗಲಿದೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 68 ರೂ.ಗೆ ಇಳಿಕೆಯಾಗಲಿದೆ, ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆಯೇ ಹೇಳಿತ್ತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 91.17 ರೂ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 81.94 ರೂಗೆ ಲಭ್ಯವಿದ್ದಾಗ, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 60 ಡಾಲರ್ ಇತ್ತು ಮತ್ತು ಪ್ರತಿ ಡಾಲರ್‌ಗೆ 73 ರೂಪಾಯಿ ವಿನಿಮಯ ದರದ ಪ್ರಕಾರ ಎಸ್‌ಬಿಐ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ವ್ಯಾಪ್ತಿಯ ಬೆಲೆಗಳನ್ನು ಲೆಕ್ಕ ಹಾಕಿದೆ.
ಹಾಗಾದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?
ಜೂನ್ 2010 ರವರೆಗೆ ಪೆಟ್ರೋಲ್ ಬೆಲೆಯನ್ನು ಸರ್ಕಾರವೇ ನಿಗದಿಪಡಿಸುತ್ತಿತ್ತು ಮತ್ತು ಪ್ರತಿ 15 ದಿನಗಳಿಗೊಮ್ಮೆ ಈ ಬೆಲೆಗಳನ್ನು ಬದಲಾಯಿಸಲಾಗುತ್ತಿತ್ತು. 26 ಜೂನ್ 2010 ರ ನಂತರ ಬೆಲೆಯನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಸರ್ಕಾರ ತೈಲ ಕಂಪನಿಗಳಿಗೆ ನೀಡಿತು. ಡೀಸೆಲ್ ಬೆಲೆಯನ್ನು ಅಕ್ಟೋಬರ್ 2014 ರವರೆಗೆ ಸರ್ಕಾರವೇ ನಿಗದಿಪಡಿಸುತ್ತಿತ್ತು.19 ಅಕ್ಟೋಬರ್ 2014 ರಂದು ಡೀಸೆಲ್ ಬೆಲೆಯನ್ನು ನಿಗದಿಪಡಿಸುವ ಜವಾಬ್ದಾರಿಯನ್ನೂ ತೈಲ ಕಂಪನಿಗಳಿಗೆ ನೀಡಲಾಯಿತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ, ರೂಪಾಯಿ ವಿನಿಮಯ ದರ, ತೆರಿಗೆ, ಸಾರಿಗೆ ವೆಚ್ಚ ಇತ್ಯಾದಿಗಳಿಗೆ ಅನುಗುಣವಾಗಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಗದಿಪಡಿಸುತ್ತಿವೆ.
ಪೆಟ್ರೋಲ್ ಮತ್ತು ಡೀಸೆಲ್​ಲನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳೇನು?
ಯಾವುದೇ ಸರಕು ಅಥವಾ ಸೇವೆಗಳ ಮೇಲೆ ಜಿಎಸ್‌ಟಿಯನ್ನು ನಿಗದಿಪಡಿಸುವ ಮೊದಲು, ಹಿಂದಿನ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು ತೆರಿಗೆ ವಿಧಿಸುತ್ತಿದ್ದವು. ಏಕೆಂದರೆ ಇದರಿಂದ ಅವರು ಯಾವುದೇ ರೀತಿಯ ನಷ್ಟವನ್ನು ಅನುಭವಿಸುವಂತಾಗಬಾರದು. ತಾಂತ್ರಿಕ ಭಾಷೆಯಲ್ಲಿ ಇದನ್ನು ರೆವಿನ್ಯೂ ನ್ಯೂಟ್ರಲ್ ರೇಟ್ (RNR) ಎಂದು ಕರೆಯಲಾಗುತ್ತದೆ. ಎಂದರೆ ಸರ್ಕಾರಗಳ ಆದಾಯದಲ್ಲಿ ಸ್ಥಿರತೆಯನ್ನು ಕಾಯ್ದಿರಿಸಿಕೊಳ್ಳುವುದನ್ನು ಇದು ಹೇಳುತ್ತದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್​ಗಳ ಮೇಲೆ GST ಅನ್ನು ಜಾರಿಗೊಳಿಸದಿರುವಲ್ಲಿ ದೊಡ್ಡ ಅಡಚಣೆಯಾಗಿದೆ. ಏಕೆಂದರೆ ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ಆದಾಯದ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿ ರಾಜ್ಯಗಳಿಗೆ ಹಣದ ಕೊರತೆ ಎದುರಾಗಬಹುದು ಹೀಗಾಗಿಯೇ ರಾಜ್ಯ ಸರ್ಕಾರಗಳು ಇದನ್ನು ಒಪ್ಪಲು ತಯಾರಿಲ್ಲ.

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಅತೀ ದೊಡ್ಡ ಕಾರಣವೆಂದರೆ ಸತತವಾಗಿ ಏರಿಕೆಯಾಗಿರುವ ಕೇಂದ್ರದ ತೆರಿಗೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್​ಗಳ ಮೇಲೆ ಅಬಕಾರಿ ಸುಂಕ ವಿಧಿಸುತ್ತದೆ. ನಂತರ ರಾಜ್ಯ ಸರ್ಕಾರಗಳು ವ್ಯಾಟ್ ಮತ್ತು ಸೆಸ್ ಅನ್ನು ವಿಭಿನ್ನ ದರಗಳಲ್ಲಿ ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ವಿಧಿಸುತ್ತವೆ. ಈ ಕಾರಣದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೂಲ ಬೆಲೆಯ 3 ಪಟ್ಟು ಹೆಚ್ಚಾಗುತ್ತಿದೆ. ಪೆಟ್ರೋಲ್-ಡೀಸೆಲ್​ನ ಆದಾಯ ರಾಜ್ಯ ಸರ್ಕಾರಗಳ ಮುಖ್ಯ ಆದಾಯದ ಮೂಲವಾಗಿದೆ.

2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಂತರ, 2014-15ರ ಆರ್ಥಿಕ ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಒಟ್ಟು 1.72 ಲಕ್ಷ ಕೋಟಿ ರೂ ಇತ್ತು. ಈ ಅಂಕಿ-ಅಂಶವು 2020-21ರಲ್ಲಿ 4.54 ಲಕ್ಷ ಕೋಟಿಗೆ ರೂಗೆ ತಲುಪಿದೆ. ಅಂದರೆ ಕೇವಲ 6 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅಬಕಾರಿ ಸುಂಕದ ಗಳಿಕೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಯಾವ ರಾಜ್ಯಗಳಿಗೆ ಕಡಿತ, ಯಾವ ರಾಜ್ಯಗಳಿಗೆ ಲಾಭ?
ಎಸ್‌ಬಿಐನ ಆರ್ಥಿಕ ಸಂಶೋಧನಾ ವರದಿಯ ಪ್ರಕಾರ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಮಹಾರಾಷ್ಟ್ರ ಅತಿ ಹೆಚ್ಚಿನ ನಷ್ಟವನ್ನು ಅನುಭವಿಸಲಿದೆ. ಮಹಾರಾಷ್ಟ್ರದ ಆದಾಯವು 10,424 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಬಹುದು. ರಾಜಸ್ಥಾನದ ಆದಾಯ 6,388 ಕೋಟಿ ಮತ್ತು ಮಧ್ಯಪ್ರದೇಶದ ಆದಾಯ 5,489 ಕೋಟಿಗಳಷ್ಟು ಕಡಿಮೆಯಾಗಬಹುದು. ಆದರೆ ಉತ್ತರ ಪ್ರದೇಶ 2,419 ಕೋಟಿ, ಹರಿಯಾಣ 1,832 ಕೋಟಿ, ಪಶ್ಚಿಮ ಬಂಗಾಳ 1,746 ಕೋಟಿ ಮತ್ತು ಬಿಹಾರ 672 ಕೋಟಿ ಹೆಚ್ಚಿನ ತೆರಿಗೆಯನ್ನು ಪಡೆಯಬಹುದು ಎನ್ನುವುದು ಎಸ್‌ಬಿಐನ ಆರ್ಥಿಕ ಸಂಶೋಧನಾ ವರದಿಯ ಅಭಿಪ್ರಾಯವಾಗಿದೆ.

ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಆದಾಯ ಸುಮಾರು 1 ಲಕ್ಷ ಕೋಟಿಗಳಷ್ಟು ಕಡಿಮೆಯಾಗಲಿದೆ ಎನ್ನುವುದನ್ನೂ ಎಸ್​ಬಿಐ ಸಂಶೋಧನಾ ವರದಿ ಉಲ್ಲೇಖಿಸಿದೆ. ದೇಶದ ಪ್ರಜೆಗಳು ಈ ಬೆಲೆ ಏರಿಕೆಯಿಂದ ಬೇಯುತ್ತಿರುವುದು ಮಾತ್ರ ಸತ್ಯವಾಗಿದೆ. ಇಲ್ಲಿ ರಾಜ್ಯಗಳು ತಮ್ಮ ತೆರಿಗೆಯ ಮುಖ್ಯ ಆದಾಯವನ್ನು ಬಿಟ್ಟುಕೊಡಲು ತಯಾರಿಲ್ಲ. ಅತ್ತ ಕೇಂದ್ರ ಸರ್ಕಾರ ಪೆಟ್ರೊಲ್ ಮತ್ತು ಡೀಸೆಲ್ ತೆರಿಗೆಯನ್ನು ಕಡೆಇತ ಗೊಳಿಸುತ್ತಿಲ್ಲ. ಮತ್ತೊಂದು ಕಡೆ ರಾಜ್ಯ ಸರ್ಕಾರಗಳು ಹಾಗೂ ವಿರೋಧ ಪಕ್ಷಗಳು ಕೇಂದ್ರ ಸರ್ಕಾರಕ್ಕೆ ತನ್ನ ಹೆಚ್ಚುವರಿ ತೆರಿಗೆ ಕಡಿತ ಗೊಳಿಸುವ ಇಚ್ಛೆಯೇ ಇಲ್ಲ ಅದು ಕೇವಲ ತೋರ್ಪಡಿಕೆಗಾಗಿ ಹಾಗೂ ಬೆಲೆ ಏರಿಕೆಯ ತಪ್ಪನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಿ ತಪ್ಪಿಸಿಕೊಳ್ಳಲು ಈ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳುತ್ತಿವೆ.

-ಸಂತೋಷ್ ರಾಠೋಡ್

Attachment
PDF
190320-Ecowrap_20200319.pdf
Preview

Related Stories

No stories found.
TV 5 Kannada
tv5kannada.com