ಭಾರತದ ಕ್ರೀಡಾ ವ್ಯವಸ್ಥೆ ಬಗ್ಗೆ ಟೀಕಿಸಿದ್ದಕ್ಕೆ ಜಾವೆಲಿನ್​ ಕೋಚ್ ವಜಾ​..!

ಭಾರತದ ಕ್ರೀಡಾ ವ್ಯವಸ್ಥೆ ಬಗ್ಗೆ ಟೀಕಿಸಿದ್ದಕ್ಕೆ 
ಜಾವೆಲಿನ್​ ಕೋಚ್ ವಜಾ​..!
tv5

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಾಗ ಇಡೀ ಭಾರತ ಅವರನ್ನು ಕೊಂಡಾಡಿತ್ತು. ಆತನ ಹೆಸರು ಸದ್ದು ಮಾಡಿದ್ದಷ್ಟೇ, ಆತನ ಜಾವೆಲಿನ್ ಕೋಚ್​ ಉವೆ ಹಾನ್ ಅವರ ಹೆಸರೂ ಸಹ ಸದ್ದು ಮಾಡಿತ್ತು. ಆದರೆ, ಈಗ ಒಲಿಂಪಿಕ್ಸ್​ ಅಥ್ಲೆಟಿಕ್​ನಲ್ಲಿ ಭಾರತ ಚಿನ್ನ ಜಯಿಸಿ ಇನ್ನೂ ತಿಂಗಳಾಗಿಲ್ಲ ಅಷ್ಟರಲ್ಲಾಗಲೇ ಚೋಪ್ರಾ ಚಿನ್ನ ಗೆಲ್ಲಲು ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಜರ್ಮನಿ ದೇಶದ ಜಾವಲಿನ್ ದಂತಕಥೆ ಉವೆ ಹಾನ್​ರನ್ನು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ವಜಾಗೊಳಿಸಿ ಆದೇಶಿಸಿದೆ.

104.80 ಮೀಟರ್ ದೂರ ಜಾವೆಲಿನ್ ಎಸೆದು ವಿಶ್ವದಾಖಲೆ ಮಾಡಿರುವ ಮತ್ತು ನೂರು ಮೀಟರ್‌ಗಿಂತ ಹೆಚ್ಚು ದೂರ ಎಸೆದ ಏಕೈಕ ಕ್ರೀಡಾಪಟು ಎನಿಸಿಕೊಂಡಿರುವ ಉವೆ ಹಾನ್ 1999 ರಿಂದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. 2017ರಿಂದ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡು ಜಾವೆಲಿನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಉವೆ ಹಾನ್ ಅವರ ಪ್ರದರ್ಶನ ಚೆನ್ನಾಗಿಲ್ಲ. ಹಾಗಾಗಿ ಅವರನ್ನು ಬದಲಿಸುತ್ತೇವೆ. ಅವರ ಬದಲಿಗೆ ಇಬ್ಬರು ಕೋಚ್‌ಗಳನ್ನು ನೇಮಿಸುತ್ತೇವೆ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಹೇಳಿದ್ದಾರೆ.
ಸೋಮವಾರ ನಡೆದ ಎರಡು ದಿನಗಳ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಕ್ರೀಡಾಪಟುಗಳು ಮತ್ತು ತರಬೇತುದಾರರ ಕಾರ್ಯಕ್ಷಮತೆಯ ಪರಿಶೀಲನೆಯ ನಂತರ ಹಾನ್ ಅವರನ್ನು ವಜಾಗೊಳಿಸುವ ನಿರ್ಧಾರ ಬಂದಿದೆ. ಒಲಿಂಪಿಕ್ ಚಿನ್ನ ಗೆದ್ದಾಗ ಚೋಪ್ರಾ ಅವರಿಗೆ ತರಬೇತಿ ನೀಡಿದ ಕ್ಲೌಸ್ ಬಾರ್ಟೋನಿಯೆಟ್ಜ್ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.

ಅಸಲಿಗೆ ಜೂನ್ ತಿಂಗಳಲ್ಲಿ ಉವೆ ಹಾನ್ ಭಾರತೀಯ ಕ್ರೀಡಾ ವ್ಯವಸ್ಥೆಯ ವಿರುದ್ಧ ಟೀಕೆ ಮಾಡಿದ್ದರು. "ನಾನು ಕೋಚ್ ಆಗಿ ಬಂದಾಗ ಇಲ್ಲೇನಾದ್ರೂ ಬದಲಾಯಿಸಬಹುದೆಂದು ಊಹಿಸಿದ್ದೆ. ಆದರೆ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಲ್ಲಿ ಇದು ಸಾಧ್ಯವಿಲ್ಲ. ತರಬೇತಿ, ಕ್ಯಾಂಪ್ ಬಿಡಿ, ನಮ್ಮ ಟಾಪ್ ಆಟಗಾರರಿಗೆ ಬೇಕಾಗುವ ಪೌಷ್ಠಿಕ ಆಹಾರ ಕೂಡಾ ಸಿಗುತ್ತಿಲ್ಲ" ಎಂದು ಒಲಿಂಪಿಕ್ಸ್ ಆರಂಭವಾಗುವ ಒಂದು ತಿಂಗಳ ಮೊದಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಪಟಿಯಾಲದ ಧಗೆಯಲ್ಲಿ ಕೇವಲ ಬೆಳಗಿನ ಜಾವ ಹಾಗೂ ಸಂಜೆ ಆರರ ಬಳಿಕ ಮಾತ್ರ ತರಬೇತಿ ಸಾಧ್ಯವಾಗಿದ್ದರೂ, ಆಟಗಾರರನ್ನು ಹೊರದೇಶಕ್ಕೆ ಕಳುಹಿಸಿ ತರಬೇತಿ ಪಡೆಯಲು ಹಾಗೂ ಪಂದ್ಯಗಳಲ್ಲಿ ಭಾಗವಹಿಸುವಂತೆ ಮಾಡಲು ಸರ್ಕಾರ ಏನೂ ಮಾಡುತ್ತಿಲ್ಲ. ನೀರಜ್ ಚೋಪ್ರಾ ವಿದೇಶದಲ್ಲಿ ತರಬೇತಿ ಪಡೆಯಲು ಸಹಾಯ ಮಾಡಿದ್ದು ಸರಕಾರ ಅಲ್ಲ. ಬದಲಿಗೆ ಅವರನ್ನು ವೈಯಕ್ತಿಕವಾಗಿ ಪ್ರಾಯೋಜಿಸುತ್ತಿರುವ ಜೆಎಸ್‌ಡಬ್ಲ್ಯೂ ಎಂದು ಅವರು ಹೇಳಿದ್ದರು.

ಕೆಲ ದಿನಗಳ ಹಿಂದೆ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಅದಿಲ್ಲೆ ಸುಮೇರಿವಾಲಾ "ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದ ನೀರಜ್ ಚೋಪ್ರಾಗೆ ಕಾಶಿನಾಥ್ ನಾಯ್ಕ್‌ ಎಂಬುವವರನ್ನು ಕೋಚ್ ಆಗಿ ನೇಮಿಸಿಲ್ಲ. ಕಾಶಿನಾಥ್ ನಾಯ್ಕ್‌ ಯಾರು ಎಂಬುದೇ ನಮಗೆ ಗೊತ್ತಿಲ್ಲ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಮೂಲಕ ಎರಡು ವರ್ಷಗಳ ಕಾಲ ನೀರಜ್‌ ಚೋಪ್ರಾಗೆ ಕೋಚ್ ಆಗಿ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್‌ರನ್ನು ಅವಮಾನಿಸಲಾಗಿತ್ತು. ನಂತರ ಕಾಶಿನಾಥ್ ಮನೆಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಭೇಟಿ ನೀಡುವ ಮೂಲಕ ವಿವಾದಗಳಿಗೆ ತೆರೆ ಎಳೆದಿದ್ದರು.

Related Stories

No stories found.
TV 5 Kannada
tv5kannada.com