Thursday, January 20, 2022

ತೆಲಂಗಾಣದಲ್ಲಿ 42 ವಿದ್ಯಾರ್ಥಿನಿಯರು, ಓರ್ವ ಶಿಕ್ಷಕನಿಗೆ ಕೋವಿಡ್ ಸೋಂಕು

Must read

ತೆಲಂಗಾಣ: ದೇಶದ ಕೆಲವು ನಗರಗಳಲ್ಲಿ ಮಹಾಮಾರಿ ಕೋವಿಡ್ ಹಾವಳಿ ಕೆಲವು ದಿನಗಳಿಂದ ಮತ್ತೆ ಉಲ್ಬಣಗೊಳ್ಳುತ್ತಿದೆ. ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲಿ ಸಾಮೂಹಿಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮೂರು ದಿನಗಳ ಹಿಂದೆ ಒಡಿಶಾ ಹಾಗೂ ಕರ್ನಾಟಕದ ಧಾರವಾಡದ ಕಾಲೇಜಿನಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲೂ ವೈರಸ್​ ಕಾಣಿಸಿಕೊಂಡಿದೆ.

ತೆಲಂಗಾಣದ ಸಂಗಾರೆಡ್ಡಿಯ ಮುತ್ತಂಗಿ ಗುರುಕುಲದ 42 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನಲ್ಲಿ ಸೋಂಕು ದೃಢಪಟ್ಟಿದೆ. ಈ ಶಾಲೆಯಲ್ಲಿ ಒಟ್ಟು 491 ವಿದ್ಯಾರ್ಥಿನಿಯರು ಹಾಗೂ 27 ಶಿಕ್ಷಕ ಸಿಬ್ಬಂದಿ ಇದ್ದಾರೆ.
ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು, ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಗೊಂಡಿದೆ. ಈ ಬೆನ್ನಲ್ಲೇ ಶಾಲೆಯ 261 ವಿದ್ಯಾರ್ಥಿನಿಯರು ಹಾಗೂ 27 ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 42 ಬಾಲಕಿಯರಲ್ಲಿ ಸೋಂಕು ಇರುವುದು ಖಚಿತಗೊಂಡಿದೆ. ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವರನ್ನೆಲ್ಲಾ ಪ್ರತ್ಯೇಕವಾಗಿ ಇರಿಸಲಾಗಿದ್ದು, ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಗಾಯತ್ರಿ ದೇವಿ ತಿಳಿಸಿದರು.

ತೆಲಂಗಾಣದಲ್ಲಿ ಸೆಪ್ಟೆಂಬರ್​​ 1ರಿಂದ ಶಾಲಾ-ಕಾಲೇಜು​ ಪುನಾರಂಭವಾಗಿದೆ. ಇದೀಗ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಒಡಿಶಾದ ಮಯೂರ್ಭಂಜ್​​ನ ವಸತಿ ಶಾಲೆಯೊಂದರಲ್ಲಿ ಕೆಲವು ದಿನಗಳ ಹಿಂದಷ್ಟೇ 26 ವಿದ್ಯಾರ್ಥಿನಿಯರಲ್ಲಿ ಹಾಗೂ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ 281 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿತ್ತು.

Latest article