ತಿಹಾರ್ ಸೇರಿದಂತೆ ದೆಹಲಿಯ ಮೂರು ಜೈಲುಗಳಲ್ಲಿ 46 ಕೈದಿಗಳು ಮತ್ತು 43 ಉದ್ಯೋಗಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂರು ಜೈಲುಗಳಲ್ಲಿನ ಜೈಲು ಔಷಧಾಲಯವನ್ನು ‘ಕೋವಿಡ್ ಕೇರ್ ಸೆಂಟರ್’ ಆಗಿ ಪರಿವರ್ತಿಸಲಾಗಿದೆ.
ದೆಹಲಿಯ ಮೂರು ಜೈಲುಗಳಲ್ಲಿ 46 ಕೈದಿಗಳು ಮತ್ತು 43 ಉದ್ಯೋಗಿಗಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. “ಸೋಂಕಿತ ಕೈದಿಗಳು ಮತ್ತು ಸಿಬ್ಬಂದಿ ಎಲ್ಲರೂ ಪ್ರತ್ಯೇಕ ನಿವಾಸದಲ್ಲಿದ್ದಾರೆ ಮತ್ತು ಅವರ ಆರೋಗ್ಯ ಸುಧಾರಿಸುತ್ತಿದೆ” ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರದವರೆಗೆ ಸೋಂಕಿಗೆ ಒಳಗಾದ 46 ಕೈದಿಗಳಲ್ಲಿ 29 ಮಂದಿ ತಿಹಾರ್ ಮತ್ತು 17 ಮಂದಿ ಮಾಂಡೋಲಿ ಜೈಲಿಗೆ ಸೇರಿದವರು. ಸೋಂಕಿತ 43 ಉದ್ಯೋಗಿಗಳಲ್ಲಿ ಪೈಕಿ 25 ಮಂದಿ ತಿಹಾರ್, 12 ಜನ ರೋಹಿಣಿ ಮತ್ತು 6 ಮಂದಿ ಮಾಂಡೋಲಿ ಜೈಲಿನ ಉದ್ಯೋಗಿಗಳಿದ್ದಾರೆ.
ಸೋಂಕಿನ ಸಣ್ಣ ಲಕ್ಷಣಗಳನ್ನು ಹೊಂದಿರುವ ಕೈದಿಗಳಿಗೆ ಹಲವಾರು ‘ವೈದ್ಯಕೀಯ ಪ್ರತ್ಯೇಕ ಕೋಶಗಳನ್ನು’ ಸ್ಥಾಪಿಸಲಾಗಿದೆ. ಮತ್ತೊಂದೆಡೆ, ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ರೋಗಿಗಳಿಗೆ ಜೈಲಿನ ಆವರಣದಲ್ಲಿ ಪ್ರತ್ಯೇಕ ‘ಬೇರ್ಪಡಿಸುವ ಕೊಠಡಿಗಳನ್ನು’ ಸ್ಥಾಪಿಸಲಾಗಿದೆ. ತಿಹಾರ್ ನಲ್ಲಿ 120 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನು ಮತ್ತು ಮಾಂಡೋಲಿಯಲ್ಲಿ 48 ಹಾಸಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೈದಿಗಳು ಮತ್ತು ಸಿಬ್ಬಂದಿಯನ್ನು ನೋಡಿಕೊಳ್ಳಲು ನಾಲ್ಕು ಸಮಿತಿಗಳನ್ನು ರಚಿಸಿದ್ದೇವೆ ಎಂದು ಜೈಲು ಆಡಳಿತ ಹೇಳಿದೆ.