ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಮತ್ತು ಸಂಸದ ಕಾರ್ತಿ ಚಿದಂಬರಂ ಅವರ ಮುಂಬೈ, ಚೆನ್ನೈ ಮತ್ತು ತಮಿಳುನಾಡಿನ ಶಿವಗಂಗಾದಲ್ಲಿರುವ ನಿವಾಸಗಳ ಮೇಲೆ ಕೇಂದ್ರೀಯ ತನಿಖಾ ದಳ ದಾಳಿ ನಡೆಸಿದೆ.
ಚೆನ್ನೈ ಮತ್ತು ದೇಶದ ಇತರ ನಗರಗಳಲ್ಲಿರುವ ಕಾರ್ತಿ ಚಿದಂಬರಂ ಅವರ ಒಂಬತ್ತು ನಿವಾಸಗಳ ಮೇಲೆ ಸಿಬಿಐ ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಕಾರ್ತಿ ಚಿದಂಬರಂ ಅವರ ವಿರುದ್ಧ ಸುಮಾರು 250 ಚೀನೀಯರಿಂದ ಹಣ ಪಡೆದು ಕಾನೂನು ಬಾಹಿರವಾಗಿ ವೀಸಾ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಈ ಪ್ರಕರಣದಲ್ಲಿ ಸಿಬಿಐ ಹೊಸ ಪ್ರಕರಣವನ್ನು ದಾಖಲಿಸಿಕೊಂಡಿದೆ. ಚೆನ್ನೈನಲ್ಲಿ ಮೂರು, ಮುಂಬೈನಲ್ಲಿ ಮೂರು ಮತ್ತು ಕರ್ನಾಟಕ, ಪಂಜಾಬ್ ಮತ್ತು ಒರಿಸ್ಸಾದಲ್ಲಿ ತಲಾ ಒಂದು ಮನೆಗಳ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಪ್ರಮುಖ ದಾಖಲೆ ಕಲೆ ಹಾಕಿದ್ದಾರೆ.
ಐಎನ್ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ (ಎಫ್ಐಪಿಬಿ) ಅನುಮೋದನೆಯೊಂದಿಗೆ ವಿದೇಶದಿಂದ 305 ಕೋಟಿ ರೂಗಳನ್ನು ಸ್ವೀಕರಿಸಿದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಕಾರ್ತಿ ಚಿದಂಬರಂ ಅವರನ್ನು ತನಿಖೆ ನಡೆಸಲಾಗುತ್ತಿದೆ.