ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯ ಕುರಿತಾದ ವಿವಾದದ ನಡುವೆ ನಟಿ ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ರೂಪದಲ್ಲಿ ಹಿಂಸೆಯನ್ನು ಖಂಡಿಸುವುದು ನನ್ನ ಉದ್ದೇಶವಾಗಿತ್ತು ಎಂದು ಸಾಯಿ ಪಲ್ಲವಿ ತಿಳಿಸಿದ್ದಾರೆ.
View this post on Instagram
ತಮ್ಮ ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಪ್ರಶ್ನಿಸಿದ್ದರು. ನಟಿ ಸಾಯಿ ಪಲ್ಲವಿ ಈ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು.
ಇದೀಗ ನಟಿ ಸಾಯಿ ಪಲ್ಲವಿ ವಿಡಿಯೋ ಮುಖಾಂತರ ಸ್ಪಷ್ಟನೆ ನೀಡಿದ್ದಾರೆ. ನನ್ನ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೊದಲು ಇದೇ ಮೊದಲ ಬಾರಿಗೆ ನಾನು ಎರಡು ಬಾರಿ ಯೋಚಿಸುತ್ತಿದ್ದೇನೆ. ಏಕೆಂದರೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನೀವು ಬಲಪಂಥೀಯಕ್ಕೆ ಬೆಂಬಲ ನೀಡುತ್ತೀರಾ ಅಥವಾ ಎಡಪಂಥೀಯಕ್ಕೆ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆ ನನಗೆ ಕೇಳಲಾಗಿತ್ತು. ಆಗ ನಾನು ಸ್ಪಷ್ಟವಾಗಿ ‘ನ್ಯೂಟ್ರಲ್’ ಆಗಿದ್ದೇನೆ ಎಂದು ಹೇಳಿದೆ. ನಾವು ಮೊದಲು ಮಾನವೀಯ ಮೌಲ್ಯಗಳುಳ್ಳ ಉತ್ತಮ ಮನುಷ್ಯರಾಗಬೇಕು, ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು ಅಂತ ನಾನು ಹೇಳಿದ್ದೆ.
ಸಂದರ್ಶನದ ಮುಂದುವರಿದ ಭಾಗದಲ್ಲಿ ನಾನು ಉದಾಹರಣೆಯಾಗಿ ಎರಡು ವಿಷಯಗಳನ್ನು ಪ್ರಸ್ತಾಪ ಮಾಡಿದೆ. ಹಾಗೆ ನೋಡಿದರೆ, ನಾನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾದ ವೀಕ್ಷಿಸಿದ ಬಳಿಕ ನಿರ್ದೇಶಕರೊಂದಿಗೆ ಮಾತನಾಡಿದ್ದೆ. ಜನರ ನೋವನ್ನು ಕಂಡು ನನಗೆ ಬೇಸರವಾಗಿದೆ ಎಂದು ನಿರ್ದೇಶಕರಿಗೆ ನಾನು ತಿಳಿಸಿದ್ದೆ.
ಕೋವಿಡ್ ಸಮಯದಲ್ಲಿ ಹಲ್ಲೆಗೊಳದಾವರ ವಿಡಿಯೋವನ್ನೂ ನೋಡಿ ನನಗೆ ಬೇಸರವಾಯಿತು. ಯಾವುದೇ ರೀತಿಯಲ್ಲಿ ಹಿಂಸೆ ಮಾಡುವುದು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ಜೀವವನ್ನು ತೆಗೆಯುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಮೆಡಿಕಲ್ ಗ್ರ್ಯಾಜುಯೇಟ್ ಆಗಿ ಎಲ್ಲರ ಜೀವ ಮುಖ್ಯ ಮತ್ತು ಸಮಾನ ಎಂದು ನಾನು ನಂಬುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.