ಮಂಡ್ಯ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾಳಿ ಸ್ವಾಮಿಗೆ ಮಂಡ್ಯ ಜಿಲ್ಲೆಯ ಪ್ರವೇಶಕ್ಕೆ ಶಾಶ್ವತ ನಿರ್ಬಂಧ ಹೇರುವಂತೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರೈತ, ದಲಿತ, ಕೃಷಿ ಕೂಲಿಕಾರರು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ್ದು, ಪ್ರಮೋದ್ ಮುತಾಲಿಕ್ ಹಾಗೂ ಕಾಳಿ ಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯ ಮಸೀದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ, ಕೋಮು ಸೌಹಾರ್ದತೆ ಕದಡುತ್ತಿದ್ದಾರೆ. ಇಲ್ಲಿನ ಸಾಮಾಜಿಕ ಬದುಕು ಅಭದ್ರತೆ, ಅಶಾಂತಿಯತ್ತ ದೂಡುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಳಿ ಸ್ವಾಮಿ, ಪ್ರಮೋದ್ ಮುತಾಲಿಕ್ ಇಬ್ಬರೂ ಮಂಡ್ಯ ಜಿಲ್ಲೆಯ ಹೊರಗಿನವರು. ಈ ಇಬ್ಬರ ವಿರುದ್ಧ ಕಾನೂನು ಪ್ರಕಾರ ಕ್ರಮ ವಹಿಸಬೇಕು. ಮಂಡ್ಯ ಜಿಲ್ಲೆ ಪ್ರವೇಶಿಸದಂತೆ ಶಾಶ್ವತ ನಿರ್ಬಂಧಕ್ಕೆ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು, ಡಿಸಿ ಎಸ್. ಅಶ್ವತಿ ಹಾಗೂ ಎಸ್ಪಿ ಎನ್.ಯತೀಶ್ಗೆ ತಮ್ಮ ಮನವಿ ಸಲ್ಲಿಸಿದ್ದಾರೆ.