ಕೊಪ್ಪಳ: ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥನ ಪುನರುಜ್ಜೀವನಕ್ಕೆ ಪೊಲೀಸರು ನೆರವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥರೊಬ್ಬರು ಹಲವಾರು ವರ್ಷಗಳಿಂದ ಕುಷ್ಟಗಿ ರಸ್ತೆಯ ಮರದ ಕೆಳಗೆ ವಾಸಿಸುತ್ತಿದ್ದರು. ಇದನ್ನು ಗಮನಿಸಿದ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಆತನಿಗೆ ಸಹಾಯ ಮಾಡಲು ಮುಂದಾಗಿದ್ದು, ಕೊಪ್ಪಳ ನಗರ ಠಾಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕೊಪ್ಪಳ ನಗರ ಠಾಣಾಧಿಕಾರಿ ಮಾರುತಿ ಗುಳ್ಳಾರಿ ಹಾಗೂ ಸಿಬ್ಬಂದಿ ವರ್ಗ ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡಿದ್ದು, ಧಾರವಾಡದ ಮಾನಸಿಕ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಬಳಿಕ ಪೊಲೀಸರು ಆತನನ್ನು ರಾಯಚೂರಿನ ನಿರಾಶ್ರಿತರ ಪುನರುಜ್ಜೀವನ ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಪೊಲೀಸರು ಈ ಮಾನವೀಯತೆ ಕೆಲಸಕ್ಕೆ ಕೊಪ್ಪಳದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.