ಕೊಪ್ಪಳ: ವಿವಿಧತೆಯಲ್ಲಿ ಏಕತೆ ಕಂಡ ರಾಷ್ಟ್ರ ನಮ್ಮ ಭಾರತ. ಇಲ್ಲಿ ಎಲ್ಲಾ ಜಾತಿ, ಧರ್ಮ, ಸಾಂಪ್ರದಾಯಕ್ಕೆ ಪ್ರತಿಯೊಬ್ಬರೂ ಕೂಡ ಬೆಲೆ ಕೊಡುತ್ತಾರೆ ಎನ್ನುವುದಕ್ಕೆ ಕೊಪ್ಪಳದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಮುಸ್ಲಿಂ ಸಮಾಜದ ಪಾರ್ಥಿವ ಶರೀರವನ್ನು ಕಬರಸ್ತಾನಕ್ಕೆ ಸಾಗಿಸುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ನೆರೆದಿದ್ದ ಹನುಮ ಮಾಲಾಧಾರಿಗಳು ಕೆಲ ಕಾಲ ಡಿಜೆ ಸಿಸ್ಟಮ್ ಬಂದ್ ಮಾಡಿ ಮುಸ್ಲಿಂ ಬಾಂಧವರಿಗೆ ದಾರಿ ಮಾಡಿ ಕೊಟ್ಟ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ರಾಜಕೀಯಕ್ಕಾಗಿ ಜಾತಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುತ್ತಿರುವ ಈಗಿನ ಸಂದರ್ಭದಲ್ಲಿ ಈ ರೀತಿಯಾದ ಅಪರೂಪದ ಭಾವೈಕ್ಯತೆಯ ಘಟನೆ ಪ್ರತಿಯೊಬ್ಬರಲ್ಲೂ ಮತ್ತೊಂದು ಬಾಂಧವ್ಯ ಬೆಸೆದಂತೆ ಭಾಸವಾಗುತ್ತಿತ್ತು. ಹನುಮ ಮಾಲಾಧಾರಿಗಳ ಈ ಕಾರ್ಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.