MBBS ಪೂರ್ಣಗೊಳಿಸಿರುವ ವೈದ್ಯರ ಕಡ್ಡಾಯ ಸರ್ಕಾರಿ ಸೇವೆಯ (Compulsory Rural Service) ಕೌನ್ಸೆಲಿಂಗ್ ಜುಲೈ ಮೊದಲ ವಾರದಿಂದ ಆರಂಭವಾಗಲಿದೆ. ಹಾಲಿ ಸರ್ಕಾರಿ ಸೇವೆಯಲ್ಲಿರುವ ವೈದ್ಯರ ಅವಧಿ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಜುಲೈ ತಿಂಗಳಿನಿಂದ ಈ ವರ್ಷದ ಪ್ರಕ್ರಿಯೆ ಆರಂಭಿಸಲು ಆರೋಗ್ಯ ಇಲಾಖೆ ಸಿದ್ಧತೆ ಆರಂಭಿಸಿದೆ.
ರಾಜೀವ್ಗಾಂಧಿ ಆರೋಗ್ಯ ವಿವಿಯಿಂದ ಈಗಾಗಲೇ ಎಂಬಿಬಿಎಸ್ ತೇರ್ಗಡೆ ಹೊಂದಿರುವ ಪಟ್ಟಿಯನ್ನ ಪಡೆದಿರುವ ಆರೋಗ್ಯ ಇಲಾಖೆ, ಖಾಲಿ ಇರುವ ಹಾಗೂ ಖಾಲಿ ಆಗಲಿರುವ ಸ್ಥಳಗಳಿಗೆ ನಿಯೋಜನೆ ಮಾಡಲಿದೆ. MBBS ನಲ್ಲಿ ಪಡೆದಿರುವ ಅಂಕಗಳ ಅನುಸಾರ ಕೌನ್ಸೆಲಿಂಗ್ ನಡೆಸಲಿದೆ. ಎಲ್ಲ ಪ್ರಕ್ರಿಯೆ ಆನ್ಲೈನ್ ಮೂಲಕವೇ ನಡೆಯಲಿದ್ದು, ಜುಲೈ ತಿಂಗಳಲ್ಲೇ ಪ್ರಕ್ರಿಯೆಯನ್ನ ಪೂರ್ಣಗೊಳಿಸಲು ಉದ್ದೇಶಿಸಿದೆ.
ಸ್ನಾತಕೋತ್ತರ ವೈದ್ಯರ ಕಡ್ಡಾಯ ಸೇವೆ ಕೊಂಚ ವಿಳಂಬ..!
ಸ್ನಾತಕೋತ್ತರ ಪದವಿ (MD, MS) ಮುಗಿಸಿರುವ ತಜ್ಞ ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ Compulsory Rural Service) ನಿಯೋಜನೆ ಕೊಂಚ ವಿಳಂಬವಾಗಲಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ(RGUHS) ಈವರೆಗೂ ತೇರ್ಗಡೆ ಹೊಂದಿರುವ ವೈದ್ಯರ ವಿವರ ಸಲ್ಲಿಸಿಲ್ಲ. ಹಾಲಿ ತಜ್ಞ ವೈದ್ಯರ ಕಡ್ಡಾಯ ಸೇವಾ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಅದಲ್ಲದೇ ಕಳೆದ ಬಾರಿ ವೈದ್ಯರ ನೇಮಕಾತಿಯಾಗಿರುವ ಕಾರಣ ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಅಷ್ಟಾಗಿಲ್ಲ. ಈ ಬಾರಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವವರ ಸಂಖ್ಯೆ ಹೆಚ್ಚಳವಾಗಿದೆ. ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡಿರುವ ಆರೋಗ್ಯ ಇಲಾಖೆ ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನ ಸಿದ್ಧಗೊಳಿಸುತ್ತಿದೆ. ಈವರೆಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಖಾಲಿ ಇರುವ ವೈದ್ಯರ ಮಾಹಿತಿಯೂ ಇನ್ನು ಸಲ್ಲಿಕೆಯಾಗಿಲ್ಲ. ಹೀಗಾಗಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆ ಜುಲೈ ಅಂತ್ಯದಲ್ಲಿ ಅಥವಾ ಆಗಷ್ಟ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಇಲಾಖೆಳು ಮೂಲಗಳು ತಿಳಿಸಿವೆ.