Tuesday, May 17, 2022

ಇಷ್ಟು ಕಲರ್ಫುಲ್ ತರಕಾರಿಗಳನ್ನು ಎಲ್ಲಾದರೂ ನೋಡಿದ್ದೀರಾ?

Must read

ಕಲರ್ ಫುಲ್ ತರಕಾರಿಗಳನ್ನು ಬೆಳೆಯುವ ಸಲುವಾಗಿ, ಭೋಪಾಲದ ಖಜೂರಿಕಾಳನ್ ನ ನಿವಾಸಿ ಪ್ರಾಯೋಗಿಕ ರೈತ ,ಮಿಶ್ರೀಲಾಲ್ ರಜಪೂತ್ ಅವರು ಡಿಸೆಂಬರ್ -2020 ರಲ್ಲಿ ಉತ್ತರ ಪ್ರದೇಶದ ಬನಾರಸ್‌ ನ ತರಕಾರಿ ಸಂಶೋಧನಾ ಸಂಸ್ಥೆಯಿಂದ ಕೆಂಪು ಬೆಂಡಿಕಾಯಿ (ಕಾಶಿ ಲಲಿಮಾ) ಬೀಜಗಳನ್ನು ತಂದಿದ್ದರು. ಈ ವಿಶೇಷ ಬೀಜಗಳಿಂದ ಅವರು ತಾವೇ ಹೆಚ್ಚು ಬೀಜಗಳನ್ನು ಉತ್ಪತ್ತಿ ಮಾಡಿಕೊಂಡು, ಹೊಸದಾದ ತಳಿಗಳು ಮತ್ತು ವರ್ಣರಂಜಿತ ತರಕಾರಿಗಳನ್ನು ಬೆಳೆಸುವ ಮೂಲಕ ಸುದ್ದಿಯಾಗುತ್ತಿದ್ದಾರೆ.

ಹೌದು ಇಲ್ಲಿ ಹಲವು ವಿಧದ ನೀಲಿ ಆಲೂಗಡ್ಡೆ, ಕೆನ್ನೇರಳೆ ಎಲೆಕೋಸು, ವರ್ಣರಂಜಿತ ಕ್ಯಾಪ್ಸಿಕಂ, ಕೆಂಪು ಬೆಂಡಿಕಾಯಿ ಮುಂತಾದ ತರಕಾರಿಗಳನ್ನು ಅವರು ಬೆಳೆಯುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ಬಣ್ಣಕ್ಕಿಂತ ಭಿನ್ನವಾಗಿ ಮತ್ತು ಸುಂದರವಾಗಿ ಕಾಣುವ ಈ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ತರಕಾರಿ ಸಂಶೋಧನಾ ಸಂಸ್ಥೆಯಿಂದ ತಂದ ಈ ವಿಶೇಷ ಬೀಜಗಳಿಂದ ಅವರು ಹೆಚ್ಚು ಬೀಜಗಳನ್ನು ಮಾಡಿದ್ದಲ್ಲದೇ ಈ ಬೀಜಗಳಿಂದಾಗಿ ಅವರು ಈಗ ಕೆಂಪು ಬೆಂಡಿಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.

ರೈತ ಮಿಶ್ರೀಲಾಲ್ ರಜಪೂತ್ ತಮ್ಮ ಹೊಲದಲ್ಲಿ ಕೆಂಪು ಬೆಂಡೆಕಾಯಿ ಬೆಳೆದಿದ್ದಾರೆ. ಇದು ಸಾಮಾನ್ಯ ಬೆಂಡೆಕಾಯಿಗಿಂತ 5-7 ಪಟ್ಟು ಹೆಚ್ಚು ದುಬಾರಿಯಾಗಿದೆ ಎಂದು ಅವರು ಹೇಳಿದರು. ಕೆಲವು ಮಾಲ್ ಗಳಲ್ಲಿ 250 ಗ್ರಾಂ/500 ಗ್ರಾಂಗೆ 75-80 ರೂ.ಗಳಿಂದ 300-400 ರೂ.ವರೆಗೆ ಮಾರಾಟವಾಗುತ್ತಿದೆ! ಮಿಶ್ರಿಲಾಲ್ ರಜಪೂತ್ ಪ್ರಕಾರ, ಸಂಶೋಧನಾ ಸಂಸ್ಥೆಯ ಈ ವೈವಿಧ್ಯಮಯ ಕೆಂಪು ಬೆಂಡಿಕಾಯಿ ಮೇಲೆ ಕೀಟನಾಶಕಗಳ ಬಳಕೆ ಅತ್ಯಲ್ಪವಂತೆ. ಈ ವಿಶೇಷ ತರಕಾರಿಗಳನ್ನು ಸೇವಿಸುವುದರಿಂದ, ದೇಹವು ಬಹಳಷ್ಟು ಪ್ರಯೋಜನವನ್ನು ಪಡೆಯುತ್ತದೆ. ದೇಹದೊಳಗಿನ ರಕ್ತದೊತ್ತಡ, ಬೊಜ್ಜು, ಹೃದ್ರೋಗದ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಹೃದಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರೊಂದಿಗೆ ಇದರಲ್ಲಿರುವ ಫೋಲಿಕ್ ಆಮ್ಲವು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ರಾಮಬಾಣವಾಗಿದೆ. ಈ ವರ್ಣರಂಜಿತ ತರಕಾರಿಗಳ ಬಳಕೆ ಮತ್ತು ಕೃಷಿಗಾಗಿ ರಜಪೂತ್ ಅವರಿಗೆ ಮಧ್ಯಪ್ರದೇಶ ಕೃಷಿ ಭೂಷಣ ಪ್ರಶಸ್ತಿಯನ್ನೂ ನೀಡಲಾಗಿದೆ.

Also read:  ವಿಮಾನದಲ್ಲಿ ಸಹಪ್ರಯಾಣಿಕನ ಜೀವ ಉಳಿಸಿದ ಕೇಂದ್ರ ಕ್ಯಾಬಿನೆಟ್ ಸಚಿವ, ಎಲ್ಲೆಡೆಯಿಂದ ಸಚಿವರ ಕಾರ್ಯಕ್ಕೆ ಶ್ಲಾಘನೆ!

ಸಾಮಾನ್ಯ ಎಲೆಕೋಸಿಗಿಂತ ಎರಡು ಮೂರು ಪಟ್ಟು ಹೆಚ್ಚು ಬೆಲೆಗೆ ಕೆಂಪು ಎಲೆಕೋಸು ಮಾರಾಟವಾದಂತೆ, ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕೆಂಪು ಬೆಂಡಿಕಾಯಿ ಕೂಡ ಹೆಚ್ಚಿನ ಬೆಲೆಗೆ ಮಾರಾಟವಾಗಲಿದೆ ಎಂದು ರಜಪೂತ ಹೇಳಿದರು. ಇದರೊಂದಿಗೆ ಚಂಬಲ್, ರೈತರಿಂದ ಈ ಕೃಷಿಗೆ ಹೆಚ್ಚಿನ ವಿಶೇಷ ಗಮನ ನೀಡಲಾಗುತ್ತಿದೆ. ಚಂಬಲ್ ರೈತರು ಕೆಂಪು-ಹಳದಿ ಕ್ಯಾಪ್ಸಿಕಂನೊಂದಿಗೆ ನೇರಳೆ ಎಲೆಕೋಸು ಬೆಳೆಯುತ್ತಿದ್ದಾರೆ. ಈಗ ಕೆಂಪು ಬೆಂಡಿಕಾಯಿ ಬೆಳೆಯುವತ್ತ ಕೂಡ ಇವರು ಮುಂದಾಗಿದ್ದಾರೆ. ಹೆಚ್ಚೆಚ್ಚು ರೈತರು ಇವನ್ನು ಬೆಳೆಯತೊಡಗಿದರೆ ಹೆಚ್ಚು ಪೋಷಕಾಂಶವುಳ್ಳ ಇವು ಎಲ್ಲರಿಗೂ ಕಡಿಮೆ ಬೆಲೆಗೆ ಸಿಗುವಂತಾಗುತ್ತವೆ.

Latest article