Tuesday, May 17, 2022

ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಪಾರು, 4 ವರ್ಷದ ಕಂದಮ್ಮ ಸಾವು

Must read

ಗದಗ: ಸಾಲಬಾಧೆ ತಾಳಲಾರದೇ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಬಳಿ ನಡೆದಿದೆ. ಉಮಾದೇವಿ ಮೂವರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

ಉಮಾದೇವಿ ಅವರ ಪತಿ ಸಂಗಮೇಶ್​ ಕಳೆದ ಆರು ತಿಂಗಳ ಹಿಂದೆ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಜೊತೆಗೆ 20 ಲಕ್ಷ ಸಾಲ ಮಾಡಿದ್ದರು. ಪತಿ ತೀರಿಕೊಂಡ ಮೇಲೆ ತೀವ್ರ ನೊಂದಿದ್ದ ಉಮಾದೇವಿ, ಇಂದು ನಸುಕಿನ ಜಾವ ಮಕ್ಕಳನ್ನು ಎಬ್ಬಿಸಿ ಊರಿಗೆ ಹೋಗೋಣ ಎಂದು ಹೊರಡಿಸಿ ಮಲಪ್ರಭಾ ನದಿ ಬಳಿ ಕರೆದುಕೊಂಡು ಬಂದಿದ್ದಾರೆ. ಈ ವೇಳೆ 12 ಮತ್ತು 14 ವರ್ಷದ ಇಬ್ಬರು ಮಕ್ಕಳು ತಾಯಿ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ನಂತರ 8 ವರ್ಷದ ಮಗುವಿನೊಂದಿಗೆ ಉಮಾದೇವಿ ನದಿಗೆ ಹಾರಿದ್ದಾಳೆ.

ನದಿಗೆ ಹಾರಿದ ಮಹಿಳೆ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ನಂತರ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಉಮಾದೇವಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆದರೆ, ಈ ಘಟನೆಯಲ್ಲಿ ಏನೂ ಅರಿಯದ 4 ವರ್ಷದ ಕಂದಮ್ಮ ಮೃತಪಟ್ಟಿದೆ.

ಉಮಾದೇವಿ ಹಣದ ಅಡಚಣೆ ಬಗ್ಗೆ ತವರು ಮನೆಯವರ ಬಳಿ ಹೇಳಿಕೊಂಡಿದ್ದರಂತೆ. ಕೋವಿಡ್​ನಿಂದ ಪತಿ ಮೃತಪಟ್ಟ ಬಳಿಕ ಅವರ ನೌಕರಿ ತನಗೆ ಕೊಡಿಸುವಂತೆ ಸಹೋದರನ ಬಳಿ ಕೇಳಿಕೊಂಡಿದ್ದರಂತೆ. ಸಹೋದರ ಹಾಲಪ್ಪ ಅಂಗಡಿ ಬಳಿ ನಿನ್ನೆಯೂ ಕರೆ ಮಾಡಿನಾಡಿದ್ದರು. ಆದರೆ, ಇಂದು ಮುಂಜಾನೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಬದುಕುಳಿದ ಉಮಾದೇವಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗದ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Latest article