Wednesday, May 18, 2022

ಹರಿಯಾಣ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಎಫೆಕ್ಟ್: ಎಚ್ಚೆತ್ತ ರಾಜ್ಯ ಬಿಜೆಪಿ

Must read

ಹುಬ್ಬಳ್ಳಿ: ಬೈ ಎಲೆಕ್ಷನ್‌ ಗೆದ್ದು ಸರ್ಕಾರ ಭದ್ರ ಮಾಡಿಕೊಳ್ಳಲು ಬಿಜೆಪಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ರಿಸಲ್ಟ್‌ ಮತ್ತು ಬಹುತೇಕ ಪಕ್ಷಾಂತರಿಗಳ ಸೋಲು ರಾಜ್ಯ ಬಿಜೆಪಿಗೆ ಚುರುಕು ಮುಟ್ಟಿಸಿದೆ. ಇದರಿಂದ ಎಚ್ಚೆತ್ತಿರುವ ಕಮಲ ಪಾಳಯ ಹುಬ್ಬಳ್ಳಿಯಲ್ಲಿಂದು ಸಭೆ ನಡೆಸಿ, ಗೆಲುವಿನ ರಣತಂತ್ರಗಳ ಕುರಿತು ಚರ್ಚಿಸಿತು.

ಉತ್ತರ ಕರ್ನಾಟಕದ ಕಾಗವಾಡ, ಗೋಕಾಕ್, ಅಥಣಿ, ಹಿರೇಕೆರೂರು, ರಾಣೇಬೆನ್ನೂರು, ಹೊಸಪೇಟೆ ಹಾಗೂ ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅನರ್ಹರಿಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದರೆ ಅವರೇ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ನಾಯಕರು ಸಭೆಗೆ ತಿಳಿಸಿದರು.

ಇದಕ್ಕೆ ರಾಣೇಬೆನ್ನೂರಿನ‌ ಡಾ.ಬಸವರಾಜ್ ಹಾಗೂ ಯು.ಬಿ.ಬಣಕಾರ್ ಮೊದಲು ಆಕ್ಷೇಪ ಎತ್ತಿದರೂ ನಂತರ ಉನ್ನತ ಹುದ್ದೆಯ ಭರವಸೆ ಮೇರೆಗೆ ಸುಮ್ಮನಾದರು. ಮೊದಲಿಗೆ ಹಾವೇರಿ‌ ನಾಯಕರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವಂತೆ ಮುಖಂಡರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಸಭೆ ಮುಗಿಸಿ ಹೊರಬಂದ ಬಸವರಾಜ್ ಹಾಗೂ ಬಣಕಾರ್, ಅನರ್ಹರರು ಬಿಜೆಪಿ ಸೇರಿದ ಮೇಲೆ‌ ನೋಡೋಣ ಅಂತ ಅಡ್ಡಗೋಡೆ ಮೇಲೆ ದೀಪವಿಟ್ಟರು. ಅಲ್ಲದೆ, ಕೆಲ ಟಿಕೆಟ್ ಆಕಾಂಕ್ಷಿಗಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಭೆಗೆ ಎಲ್ಲಾ 7 ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ಆಹ್ವಾನ ನೀಡಿದ್ದರೂ ಬಳ್ಳಾರಿ ಹಾಗೂ ಬೆಳಗಾವಿ ನಾಯಕರು ಗೈರಾಗುವ ಮೂಲಕ ವರಿಷ್ಠರಿಗೆ ಶಾಕ್ ನೀಡಿದ್ದಾರೆ. ಕಾಗವಾಡ ಪರಾಜಿತ ಅಭ್ಯರ್ಥಿ ರಾಜುಕಾಗೆ, ಗೋಕಾಕ್ ಪರಾಜಿತ ಅಭ್ಯರ್ಥಿ ಅಶೋಕ್ ಪೂಜಾರಿ ಸೇರಿದಂತೆ ಬಹುತೇಕರು ಗೈರಾಗೋ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಬಳ್ಳಾರಿ ನಾಯಕರು ರಾಜೀನಾಮೆ ಪತ್ರ ಹಿಡಿದು ವರಿಷ್ಠರ ಮುಂದೆ ಕೂತ ಪ್ರಸಂಗವೂ ನಡೆಯಿತು.

ಜನಾರ್ದನ ರೆಡ್ಡಿ ಆಪ್ತನಿಗೆ ಬಳ್ಳಾರಿ‌ ನಗರಾಭಿವೃಧಿ ಪ್ರಾಧಿಕಾರದ ಅಧ್ಯಕ್ಷಗಿರಿ ನೀಡಿದ್ದಕ್ಕೆ ಅಸಮಾದಾನ ವ್ಯಕ್ತಪಡಿಸಿ ಜಿಲ್ಲಾಧ್ಯಕ್ಷ ಸೇರಿದಂತೆ ಕೆಲ ಮುಖಂಡರು ರಾಜೀನಾಮೆ ನೀಡಲು ಮುಂದಾದರು. ಇದರಿಂದ ಕಂಗಲಾದ ಸಿಎಂ ಯಡಿಯೂರಪ್ಪ ತಕ್ಷಣ ಪ್ರಧಾನ ಕಾರ್ಯದರ್ಶಿಗೆ ಫೋನಾಯಿಸಿ ಆದೇಶ ರದ್ದು ಮಾಡಲು ಸೂಚಿಸಿದ ಬಳಿಕೆ ರಾಜೀನಾಮೆ‌ ಹಿಂಪಡೆಯಲಾಯಿತು.

Also read:  ಮೋದಿಗೆ ಓಟು ಹಾಕಿ : ಸಿದ್ದರಾಮಯ್ಯ ಎಡವಟ್ಟು

ಹೊಸಪೇಟೆ ಉಪಚುನಾವಣೆ ಸಂಬಂಧ ಕರೆದ ಸಭೆಗೆ ಬಳ್ಳಾರಿ ಜಿಲ್ಲಾ ಪ್ರಮುಖ ನಾಯಕರು ಗೈರಾಗಿ ಮತ್ತೆ ಬಿಜೆಪಿ ನಾಯಕರಿಗೆ ತಲೆನೋವು ತಂದಿದ್ದಾರೆ. ಕೆಲ ಬಿಜೆಪಿ ನಾಯಕರು ಅನರ್ಹರು ಇನ್ನೂ ಪಕ್ಷಕ್ಕೆ ಬಂದಿಲ್ಲ ಅಂದ್ರೆ, ಇನ್ನು ಕೆಲವರು ಅವರಿಂದಾನೇ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಅವರಿಗಾಗಿ ತ್ಯಾಗ ಮಾಡೋಕೆ‌ ರೆಡಿ ಅಂತ ತಿಳಿಸಿದರು.

ಮಧ್ಯಾಹ್ನದ ಹೊತ್ತಿಗೆ ಸಭೆ ನಡೆಸುತ್ತಿದ್ದ ಖಾಸಗಿ ಹೋಟಲ್‌ಗೆ ಬಂದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಸಿಎಂ ಭೇಟಿಗೆ ಬಂದಿದ್ದೇನೆ ಹೊರತು ಸಭೆಗಲ್ಲ ಎಂದು ಸ್ಪಷ್ಟಪಡಿಸಿದ್ರು. ಒಟ್ಟಿನಲ್ಲಿ ದಿನವಿಡೀ ನಡೆದ ಸಭೆಯಲ್ಲಿ ಬಿಜೆಪಿ‌ ನಾಯಕರಿಗೆ ಅನರ್ಹ ಕ್ಷೇತ್ರಗಳಲ್ಲಿ ಟಿಕೆಟ್ ಹಂಚೋದು ಅಷ್ಟು ಸಲೀಸಿಲ್ಲ ಅನ್ನೋದು ಖಚಿತವಾಗಿದೆ.

Latest article