Wednesday, May 18, 2022

ಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ಕಾಯ್ತಿದೆ ಸ್ಪೆಷಲ್ ಗಿಫ್ಟ್​

Must read

ವರಮಹಾಲಕ್ಷ್ಮೀ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಿಂದೆಲ್ಲಾ ಹಬ್ಬ ಅಂದ್ರೆ, ಸ್ಯಾಂಡಲ್​ವುಡ್​ ಸಂಭ್ರಮಿಸುತ್ತಿತ್ತು. ಆದರೆ, ಕೊರೊನಾ ಈ ವರ್ಷ ಎಲ್ಲಾ ಸಂಭ್ರಮಕ್ಕೂ ಕೊಳ್ಳಿ ಇಟ್ಟಿದೆ. 5 ತಿಂಗಳಿನಿಂದ ಸೈಲೆಂಟ್​ ಆಗಿದ್ದ ಚಿತ್ರರಂಗ ನಿಧಾನವಾಗಿ ಸದ್ದು ಮಾಡಲು ಶುರು ಮಾಡಿದೆ. ಆಗಸ್ಟ್​ನಲ್ಲಿ ಸಿನಿಮಾ ಪ್ರದರ್ಶನಕ್ಕೂ ಅನುಮತಿ ಸಿಗುವ ಸಾಧ್ಯತೆಯಿದೆ. ಮತ್ತೊಂದ್ಕಡೆ ದೊಡ್ಡ ದೊಡ್ಡ ಸಿನಿಮಾಗಳ ಶೂಟಿಂಗ್​​ ಶೀಘ್ರದಲ್ಲೇ ಶುರುವಾಗ್ತಿದೆ. ವರಮಹಾಲಕ್ಷ್ಮೀ ಕೃಪೆಯಿಂದ ಚಿತ್ರರಂಗ ಎದ್ದು ಬರುವ ಸುಳಿವು ಸಿಕ್ತಿದೆ.

ಹಬ್ಬ ಅಂದ್ರೆ, ಚಿತ್ರರಂಗಕ್ಕೂ ಸಂಭ್ರಮ. ಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್​ ಮಾಡೋದು, ಸಿನಿಮಾ ಮುಹೂರ್ತ ಮಾಡೋದು, ಪೋಸ್ಟರ್​, ಟೀಸರ್, ಕೆಲವೊಮ್ಮೆ ದೇವರ ಮೇಲೆ ಭಾರ ಹಾಕಿ​ ದೊಡ್ಡ ದೊಡ್ಡ ಸಿನಿಮಾಗಳನ್ನ ರಿಲೀಸ್​ ಮಾಡೋದು ವಾಡಿಕೆ. ಸದ್ಯ ಡೆಡ್ಲಿ ಕೊರೊನಾ ಇಡೀ ಚಿತ್ರರಂಗವನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ. ಇಂತಹ ಸಮಯದಲ್ಲೇ ಶ್ರಾವಣ ಮಾಸ ಆರಂಭವಾಗಿದ್ದು, ವರಮಹಾಲಕ್ಷ್ಮೀ ಹಬ್ಬ ಕೂಡ ಬರ್ತಿದೆ. ಹಬ್ಬದ ಸಂಭ್ರಮದಲ್ಲಿ ಚಿತ್ರರಂಗ ರಂಗೇರುವ ಆಶಾಭಾವನೆ ಮೂಡಿದೆ.

ಲಾಕ್​ಡೌನ್​ಗೂ ಮೊದ್ಲೆ ಮುಚ್ಚಿದ ಥಿಯೇಟರ್​ ಬಾಗಿಲು ಇನ್ನು ತೆರೆದಿಲ್ಲ. ಸಿನಿಮಾಗಳ ಶೂಟಿಂಗ್​ ಮೊದಲಿನಂತೆ ನಡೀತಿಲ್ಲ. ಸಿನಿಮಾ ಮುಹೂರ್ತ, ಆಡಿಯೋ ಲಾಂಚ್, ಟ್ರೈಲರ್​ ರಿಲೀಸ್, ಫಸ್ಟ್​ ಡೇ ಫಸ್ಟ್​ ಶೋ, ಇದನ್ನೆಲ್ಲಾ ಕೇಳಿ ಹತ್ತತ್ರ ಐದು ತಿಂಗಳಾಯ್ತು. ಇದೀಗ ನಿಧಾನವಾಗಿ ಚಿತ್ರರಂಗ ಆಕ್ಟೀವ್ ಆಗ್ತಿದೆ. ಒಂದಷ್ಟು ಸಿನಿಮಾಗಳ ಶೂಟಿಂಗ್​ ಕೂಡ ನಡೀತಿದೆ. ಧೈರ್ಯ ಮಾಡಿ ಮುಂದಿನ ತಿಂಗಳು ದೊಡ್ಡ ಸಿನಿಮಾಗಳ ಶೂಟಿಂಗ್​ ಶುರು ಮಾಡಲು ತಯಾರಿ ನಡೀತಿದೆ. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಚಿತ್ರರಂಗ ಕಳೆ ಕಟ್ಟುತ್ತಿದೆ.

ಶುಭದಿನಗಳಂದು ಹೊಸ ಸಿನಿಮಾಗಳನ್ನ ಘೋಷಿಸೋದು, ಪೋಸ್ಟರ್,​ ಟೀಸರ್ ರಿಲೀಸ್​ ಮಾಡೋದು ಕಾಮನ್. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಅಂದ್ರೆ, ಚಿತ್ರರಂಗಕ್ಕೆ ಸೆಂಟಿಮೆಂಟ್​ ಹೆಚ್ಚು. ಜೋಗಿ, ಆಪ್ತಮಿತ್ರ ರೀತಿಯ ಬ್ಲಾಕ್​ ಬಸ್ಟರ್ ಸಿನಿಮಾಗಳು ಇದೇ ಹಬ್ಬದಂದು ತೆರೆಕಂಡು ಸಕ್ಸಸ್​ ಕಂಡಿದ್ದವು. ಕೊರೊನಾ ಹಾವಳಿಯಿಂದ ಚಿತ್ರರಂಗ ಕಂಗೆಟ್ಟಿದ್ದು, ಇಂತಾ ಹೊತ್ತಲ್ಲೇ ವರಮಹಾಲಕ್ಷ್ಮಿ ಹಬ್ಬ ಬರ್ತಿದೆ. ಥಿಯೇಟರ್​ ಬಂದ್​ ಆಗಿರೋದ್ರಿಂದ ಯಾವುದೇ ಸಿನಿಮಾ ರಿಲೀಸ್​ ಆಗದೇ ಇದ್ರು, ಹೊಸ ಸಿನಿಮಾಗಳ ಪೋಸ್ಟರ್​, ಟೀಸರ್​ ಬರಲಿದೆ.

Also read:  ಈ ಚಿಂತನೆಯನ್ನು ನಾನು ಬಲವಾಗಿ ನಂಬಿದ್ದೇನೆ – ಮಾಜಿ ಸಿಎಂ ಕುಮಾರಸ್ವಾಮಿ

ಲಾಕ್​ಡೌನ್​ ಸಮಯದಲ್ಲೇ ಕೆಲವರು ಕಥೆ ಕೇಳಿ ನಟಿಸೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಆ ಸಿನಿಮಾಗಳನ್ನ ಹಬ್ಬದ ದಿನ ಘೋಷಣೆ ಮಾಡುವ ಸುಳಿವು ಸಿಕ್ತಿದೆ. ಯುವರತ್ನ ಟೀಂ ಹಬ್ಬಕ್ಕೆ ಪೋಸ್ಟರ್​ ರಿಲೀಸ್​ ಮಾಡೋದಾಗಿ ಹೇಳಿದ್ದು, ವಸಿಷ್ಠ ಸಿಂಹ ನಟನೆಯ ಕಾಲಚಕ್ರ ಚಿತ್ರದ ಸಾಂಗ್​ ರಿಲೀಸ್​ ಆಗಲಿದೆ. ಇದರ ಜೊತೆಗೆ ಏಕ್​ಲವ್​ಯಾ, ಪೊಗರು, ಸೇರಿದಂತೆ ಒಂದಷ್ಟು ಸಿನಿಮಾಗಳ ಪೋಸ್ಟರ್ಸ್​​​ ರಿವೀಲ್​ ಆಗಲಿದೆ.

ಅರ್ಧಕ್ಕೆ ನಿಂತಿರುವ ಸಿನಿಮಾಗಳ ಶೂಟಿಂಗ್​ಗೆ ಸರ್ಕಾರ ಷರತ್ತುಬದ್ದ ಅನುಮತಿ ನೀಡಿದ್ರು, ದೊಡ್ಡ ದೊಡ್ಡ ಸಿನಿಮಾಗಳ ಚಿತ್ರೀಕರಣ ಪ್ರಾರಂಭಿಸಲು ಹಿಂದೇಟು ಹಾಕಲಾಗ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ದೊಡ್ಡ ಸಿನಿಮಾಗಳನ್ನ ಶೂಟಿಂಗ್​ ಕಷ್ಟ ಅನ್ನೋದು ಅದಕ್ಕೆ ಒಂದು ಕಾರಣ. ಮತ್ತೊಂದು ಸೆಟ್​ನಲ್ಲಿ ಯಾರಿಗಾದ್ರು, ಸೋಂಕು ಬಂದ್ರೆ, ಹೇಗೆ ಅನ್ನುವ ಆತಂಕ. ಆದ್ರೆ, ಕಳೆದ 15 ದಿನಗಳಿಂದ ಫ್ಯಾಂಟಮ್​ ಸಿನಿಮಾ ಶೂಟಿಂಗ್​ ನಡೀತಿದೆ. ಹೈದರಾಬಾದ್​ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ಸುದೀಪ್​ ಅಂಡ್​ ಟೀಂ ಚಿತ್ರೀಕರಣದಲ್ಲಿ ಭಾಗಿಯಾಗ್ತಿದೆ.

Also read:  'ಐಪಿಎಲ್​ನಲ್ಲಿ ಆಟಗಾರರು ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು' - ಸಚಿವ ಸಿ.ಟಿ ರವಿ

ಫ್ಯಾಂಟಮ್ ಚಿತ್ರದ ಸಣ್ಣ ಸಣ್ಣ ಟೀಸರ್​​ಗಳು ರಿಲೀಸ್​ ಆಗಿ ಅಭಿಮಾನಿಗಳಿಗೆ ಕಿಕ್​ ಕೊಡ್ತಿದೆ. ಇನ್ನು ಕೊರೊನಾ ಮಾರ್ಗಸೂಚಿಯನ್ನ ಪಾಲಿಸಿ, ಹೇಗೆ ಶೂಟಿಂಗ್​ ನಡೆಸಲಾಗ್ತಿದೆ ಅನ್ನೋದ್ರ ಮೇಕಿಂಗ್​ ವಿಡಿಯೋ ಕೂಡ ರಿಲೀಸ್​ ಆಗಿದೆ. ಇದು ಸಹಜವಾಗಿಯೇ ಚಿತ್ರರಂಗಕ್ಕೆ ಧೈರ್ಯ ತಂದಿದೆ. ಕೊರೊನಾಗೆ ಹೆದರಿ ಕೂರುವುದು ಬೇಡ, ಧೈರ್ಯವಾಗಿ ಎದುರಿಸೋಣ ಅನ್ನುವ ಆತ್ಮಸ್ಥೈರ್ಯ ತುಂಬಿದೆ. ಫ್ಯಾಂಟಮ್​ ಹಾದಿಯಲ್ಲೇ KGF-2​ ಮತ್ತು ಪೊಗರು ಚಿತ್ರೀಕರಣಕ್ಕೂ ತಯಾರಿ ನಡೀತಿದ್ದು, ಆಗಸ್ಟ್​ 15ರಿಂದ ಚಿತ್ರೀಕರಣ ಶುರುವಾಗುವ ನಿರೀಕ್ಷೆಯಿದೆ.

ಸದ್ಯ ಎರಡನೇ ಹಂತದ ಅನ್ ಲಾಕ್ ಅವಧಿ ನಡೆಯುತ್ತಿದ್ದು, ಆಗಸ್ಟ್ 1ರಿಂದ ಅನ್​ಲಾಕ್ 3.0 ಆರಂಭವಾಗಲಿದೆ. ಆಗಸ್ಟ್ 1ರ ನಂತರ ಇನ್ನೂ ಕೆಲವು ವಿಚಾರಗಳಿಗೆ ಸರ್ಕಾರ ನಿರ್ಬಂಧ ತೆರವು ಮಾಡಬಹುದು. ಇದರಲ್ಲಿ ಚಿತ್ರಮಂದಿರಗಳಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಅದೇ ನಿಜವಾದ್ರೆ, ಚಿತ್ರರಂಗಕ್ಕೆ ದೊಡ್ಡ ರಿಲೀಫ್​ ಸಿಕ್ಕಂತಾಗುತ್ತದೆ. ಸದ್ಯ ಸಿನಿಮಾ ಪ್ರದರ್ಶನಕ್ಕೆ ಥಿಯೇಟರ್​ ಮತ್ತು ಮಲ್ಟಿಫ್ಲೆಕ್ಸ್ ಮಾಲೀಕರು ​ಸಿದ್ಧವಾಗಿದ್ದಾರೆ. ಮುನ್ನಚ್ಚರಿಕೆ ಕ್ರಮಗಳನ್ನ ಅನುಸರಿಸಿ, ಸಿನಿಮಾ ಪ್ರದರ್ಶನ ಶುರುವಾಗಬಹುದು. ರಾಬರ್ಟ್​, ಕೋಟಿಗೊಬ್ಬ-3, ಸಲಗ ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿ ನಿಂತಿವೆ.

ಸದ್ಯ ವರಮಹಾಲಕ್ಷ್ಮಿ ಸಂಭ್ರಮದಲ್ಲಿ ಚಿತ್ರರಂಗ ಚೇತರಿಸಿಕೊಳ್ಳಲು ಶುರುವಾಗ್ತಿದೆ. ಶ್ರಾವಣ ಮಾಸದಲ್ಲಿ ಚಿತ್ರರಂಗ ಮತ್ತಷ್ಟು ರಂಗೇರಲಿದೆ. ಚಿತ್ರರಂಗ ಎಲ್ಲಾ ಚಟುವಟಿಕೆಗಳು ಚುರುಕು ಪಡೆದುಕೊಳ್ಳಲಿದೆ. ವರಮಹಾಲಕ್ಷ್ಮಿ ಕೃಪೆಯಿಂದ ಚಿತ್ರರಂಗ ಮತ್ತೆ ಫೀನಿಕ್ಸ್​ ರೀತಿ ಎದ್ದು ಬರುವ ಭರವಸೆ ಮೂಡಿದೆ.

Latest article