ನವದೆಹಲಿ: ಸಂಸತ್ ಅಧಿವೇಶನದಲ್ಲೂ ಇಂದು ಮಹಾರಾಷ್ಟ್ರದ ಮಹಾ ಹೈಡ್ರಾಮಾ ಪ್ರತಿಧ್ವನಿಸಿತು. ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದವು. ಈ ವೇಳೆ ಒಂದು ಅವಘಡವೂ ನಡೆಯಿತು.
ಇಬ್ಬರು ಕಾಂಗ್ರೆಸ್ ಮಹಿಳಾ ಸದಸ್ಯರನ್ನು ಹೊರಹಾಕುವಂತೆ ಸ್ಪೀಕರ್ ಓಂ ಬಿರ್ಲಾ ಸೂಚನೆ ಮೇರೆಗೆ ಬಂದ ಮಾರ್ಷಲ್ಗಳು ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಘರ್ಷಣೆ ನಡೆಯಿತು. ಇದು ಮತ್ತಷ್ಟು ಕೋಲಾಹಲಕ್ಕೆ ನಾಂದಿ ಹಾಡಿತು. ಇದರಿಂದ ನಾಳೆ ಸದನ ಮುಂದೂಡಿಕೆಯಾಯಿತು.
ಇದಾದ ಬಳಿಕ ಕಾಂಗ್ರೆಸ್ನ ಇಬ್ಬರು ಸಂಸದೆಯರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದ ಹೊರಗೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಈ ಬಗ್ಗೆ ಕಿಡಿಕಾರಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ಚೌದರಿ, ಸದನದಲ್ಲಿ ಈ ರೀತಿ ಎಂದೂ ನಡೆದಿರಲಿಲ್ಲ. ಸಂಬಂಧಿಸಿದರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ತಾರೆ ಅಂತ ಕಾದು ನೋಡ್ತೇವೆ ಎಂದಿದ್ದಾರೆ.
ಆದರೆ, ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ರವಿಶಂಕರ್ ಪ್ರಸಾದ್ ಮತ್ತು ಪ್ರಹ್ಲಾದ್ ಜೋಶಿ ಅವರು ಸ್ಪೀಕರ್ ಜೊತೆ ಸಭೆ ನಡೆಸಿ, ಅಶಿಸ್ತಿನ ವರ್ತನೆ ತೋರಿದ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ರವಿಶಂಕರ್ ಪ್ರಸಾದ್ ಸದನ ಅಶಿಸ್ತಿನ ನಡವಳಿಕೆಯ ಸ್ಥಳವಾಗಿರಲು ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಲೋಕಸಭೆಯ ಪಾವಿತ್ರ್ಯತೆ ಮತ್ತು ಶ್ರೇಷ್ಠ ಸಂಪ್ರದಾಯ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಸದನದಲ್ಲಿ ಇಂದು ಘಟಿಸಿದ ಬೆಳವಣಿಗೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಓಂ ಬಿರ್ಲಾ, ಅಶಿಸ್ತಿನ ನಡವಳಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಸಂಸತ್ತಿನಲ್ಲಾದ ಇಂದಿನ ಬೆಳವಣಿಯಿಂದ ನನಗೆ ನೋವಾಗಿದೆ ಎಂದು ಹೇಳಿರುವ ಅವರು ಕಾಂಗ್ರೆಸ್ನ ಇಬ್ಬರು ಸಂಸದೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ.
ಬೆಳಿಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಕೈಯಲ್ಲಿ ಭಿತ್ತಿಪತ್ರ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ತಡೆಯುವಂತೆ ಆಗ್ರಹಿಸುತ್ತಿದ್ದರು.
ಇದರಿಂದ ಸ್ಪೀಕರ್ ಸದನದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಧರಣಿನಿರತ ಸದಸ್ಯರನ್ನು ಹೊರಗೆ ಹಾಕುವಂತೆ ಮಾರ್ಷಲ್ಗಳಿಗೆ ಸೂಚಿಸಿದರು. ಈ ವೇಳೆ ಮಾರ್ಷಲ್ಗಳು ತಮಿಳುನಾಡು ಸಂಸದೆ ಜ್ಯೋತಿಮಣಿ ಮತ್ತು ಕೇರಳದ ರಮ್ಯಾ ಹರಿದಾಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನೋದು ಕಾಂಗ್ರೆಸ್ ಆರೋಪವಾಗಿದೆ.
ಈ ನಡುವೆ, ಲೋಕಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕಿಡಿಕಾರಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿರುವುದರಿಂದಾಗಿ ನಾನಿಂದು ಪ್ರಶ್ನೆಗಳನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ರಾಜ್ಯಸಭೆಯೂ ಇಂಥಹದ್ದೇ ಗಲಾಟೆಗೆ ಸಾಕ್ಷಿಯಾಯ್ತು. ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವು. ಆದರೆ, ಮಹಾರಾಷ್ಟ್ರ ವಿವಾದ ಚರ್ಚೆಯ ಬೇಡಿಕೆ ತಳ್ಳಿಹಾಕಿದ ಸಭಾಪತಿ ವೆಂಕಯ್ಯ ನಾಯ್ಡು ಯಾವುದೇ ನಿಲುವಳಿ ಮಂಡನೆಗೆ ಅವಕಾಶ ಮಾಡಿಕೊಡಲಿಲ್ಲ.