ಈ ವಾರ ಕನ್ನಡ ಸಿನಿಪ್ರಿಯರಿಗೆ ಮನರಂಜನೆಯ ಹಬ್ಬದೂಟ ಉಣಬಡಿಸಲು ಬ್ರಹ್ಮಚಾರಿ ಬರುತ್ತಿದ್ದಾನೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಚಿತ್ರದ ನಿರೀಕ್ಷೆ ಹೆಚ್ಚಿಸಿದ್ದು, ಈ ಸಿನಿಮಾದಲ್ಲಿ ಒಂದು ಗಂಭೀರ ವಿಷಯವನ್ನು ತಮಾಷೆಯಾಗಿ ಚಿತ್ರರಸಿಕರಿಗೆ ತೆರೆಯ ಮೇಲೆ ರಂಜಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
ಅಭಿನಯ ಚತುರ ನಿನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಸಿನಿಮಾವು ಇದೇ ನವೆಂಬರ್ 29, ಶುಕ್ರವಾರ ರಾಜ್ಯಾದ್ಯಂತ ಒಟ್ಟು 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್, ಪೈಲ್ವಾನ್ ಸಿನಿಮಾಗಳನ್ನು ವಿತರಣೆ ಮಾಡಿದ್ದ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ, ಈ ಚಿತ್ರದ ವಿತರಣೆ ಹಕ್ಕನ್ನು ಖರೀದಿಸಿದ್ದು, ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಲಭಿಸಿದೆ.

ಚಿತ್ರದಲ್ಲಿ ನಾಯಕ ನಟನಾಗಿ ಇತ್ತೀಚೆಗೆ ಯಶಸ್ವಿ ಸಿನಿಮಾ ಕೊಟ್ಟ ಅಯೋಗ್ಯ ಖ್ಯಾತಿಯ ನಿನಾಸಂ ಸತೀಶ್ ಕಾಣಿಸಿಕೊಂಡಿದ್ದು ಇವರೊಟ್ಟಿಗೆ ನಾಯಕಿ ಆಗಿ ಅಧಿತಿ ಪ್ರಭುದೇವ ಅಭಿನಯಿಸಿದ್ದಾರೆ. ಕಾಮಿಡಿ ಮತ್ತು ಕೌಟುಂಬಿಕ ಕಥಾಹಂದರ ಹೊಂದಿರುವ ಪಕ್ಕಾ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಸಿನಿಮಾ ಇದಾಗಿದೆ. ಹಂಡ್ರೆಡ್ ಪರ್ಸೆಂಟ್ ವರ್ಜಿನ್ ಅನ್ನೋ ಟ್ಯಾಗ್ಲೈನ್ ಇರೋ ಸಿನಿಮಾದಲ್ಲಿ ಬ್ರಹ್ಮಚಾರಿ ಸತೀಶ್ ಏನೆಲ್ಲಾ ಪರಿಪಾಟಲು ಪಡುತ್ತಾರೆ ಅನ್ನೋದನ್ನು ತೆರೆ ಮೇಲೆ ನೋಡಬೇಕು.
ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಚಂದ್ರಮೋಹನ್, ಬ್ರಹ್ಮಚಾರಿ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜನೆ ಮಾಡಿದ್ದರೆ, ರವಿ. ವಿ ಛಾಯಾಗ್ರಹಣವಿದೆ. ಇನ್ನೂ ಉದಯ್ ಕೆ ಮೆಹ್ತಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ.
ಶಿವರಾಜ್ ಕೆ.ಆರ್ ಪೇಟೆ, ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ಪದ್ಮಜಾ ರಾವ್, ಅಶೋಕ್, ಅಕ್ಷತಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಒಟ್ಟಾರೆ ಮನೆಮಂದಿಯಲ್ಲ ಕುಳಿತು ನೋಡುವಂತಹ ಪಕ್ಕಾ ಫ್ಯಾಮಿಲಿ ಎಂಟ್ರಟ್ರೈನ್ಮೆಂಟ್ ಸಿನಿಮಾ ಅಂತ ಬ್ರಹ್ಮಚಾರಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾಕ್ಕೆ ಭರ್ಜರಿ ಯಶಸ್ವಿ ಆಗಲಿ ಎಂಬುದು ನಮ್ಮ ಟಿವಿ5 ಕನ್ನಡದ ಆಶಯ.