ಬೆಂಗಳೂರು: ರಾಯಲ್ ಸ್ಟಾರ್ ವಿನಯ್ ರಾಜ್ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಕ್ವಾರೆಂಟೈನ್ನಲ್ಲೇ ಬರ್ತ್ಡೇ ಸೆಲೆಬ್ರೇಟ್ ಮಾಡುತ್ತಿರೋ ಅವರು, ಬರ್ತ್ಡೇ ಸ್ಪೆಷಲ್ಲಾಗಿ ‘ಗ್ರಾಮಾಯಣ’ ಚಿತ್ರದ ಸೆಕೆಂಡ್ ಟೀಸರ್ ಗಿಫ್ಟ್ ಕೊಟ್ಟಿದ್ದಾರೆ.
ದೊಡ್ಮನೆ ಮೊಮ್ಮೊಗ ವಿನಯ್ ರಾಜ್ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಲಾಕ್ಡೌನ್ ಹಿನ್ನೆಲೆ ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡೋಕ್ಕೆ ಆಗಲಿಲ್ಲವಾದರೂ, ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಅಂತೂ ಕೊಟ್ಟಿದ್ದಾರೆ. ಗ್ರಾಮಾಯಣ ಚಿತ್ರದ ಸೆಕೆಂಡ್ ಟೀಸರ್ ರಿಲೀಸ್ ಆಗಿದೆ.
ಬರ್ತ್ಡೇ ಸ್ಪೆಷಲ್ಲಾಗಿ ರಿಲೀಸ್ ಆಗಿರೋ ಗ್ರಾಮಾಯಣ ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಟೀಸರ್ನ ಮೇಕಿಂಗ್ ಅದ್ಬುತವಾಗಿದ್ದು, ವಿನಯ್ ರಾಜ್ಕುಮಾರ್ ಆ್ಯಕ್ಷನ್ ದೃಶ್ಯಗಳು ಸಖತ್ ವಿಭಿನ್ನವಾಗಿದೆ. ಇನ್ನು ಟೀಸರ್ನಲ್ಲಿ ಬರೋ ‘ಬದುಕು ಬಗ್ಗಿಸ್ಕೊಂಡ್ ಅ ಆ ಇ ಕಲ್ಸೋಕ್ಕೆ ಮುಂಚೆ ನಾವೇ ಕೆಡ್ಕೊಂಡು ಕಾಗುಣಿತ ಕಲ್ಸಬೇಕು ಕನ್ಲಾ’ ಅನ್ನೋ ಡೈಲಾಗ್ ಸಖತ್ ವೈರಲ್ ಆಗುತ್ತಿದೆ.

ಅಂದ್ಹಾಗೇ ಇದು ಗ್ರಾಮಾಯಣ ಚಿತ್ರದ ಸೆಕೆಂಡ್ ಟೀಸರ್ ಆಗಿದ್ದು, ಇದಕ್ಕೂ ಮುನ್ನ ರಿಲೀಸ್ ಆಗಿದ್ದ ಟೀಸರ್ ಕೂಡ ಸಖತ್ ಸೌಂಡ್ ಮಾಡಿತ್ತು. ಇದು ವಿನಯ್ ರಾಜ್ಕುಮಾರ್ ಅವರ 4ನೇ ಸಿನಿಮಾ ಆಗಿದ್ದು, ಫಸ್ಟ್ ಟೈಮ್ ಹಳ್ಳಿ ಹೈದನಾಗಿ, ಗಡ್ಡ ಬಿಟ್ಟು, ಲುಂಗಿ ಕಟ್ಟಿ, ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳುತ್ತಿದ್ದಾರೆ. ವಿಶೇಷ ಅಂದ್ರೆ ಗಾಜನೂರಿನ ಅಣ್ಣಾವ್ರ ಮನೆ, ಅವರ ಓಡಾಡಿದ ಸುತ್ತಮುತ್ತಲಿನ ಜಾಗಗಳಲ್ಲಿ ಸಿನಿಮಾ ಚಿತ್ರೀಕರಣವಾಗಿದೆ. ಈಗಾಗಲೇ 50 ಪರ್ಸೆಂಟ್ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ.
ಗ್ರಾಮಾಯಣ ಹಳ್ಳಿ ಸೊಗಡಿನ ಸಿನಿಮಾ ಆಗಿದ್ದು, ಹಳ್ಳಿಯ ಯುವಕರು ಪಟ್ಟಣದಲ್ಲಿ ನೆಲೆ ಕಂಡುಕೊಳ್ಳಲು ಮಾಡೋ ಹೋರಾಟ, ಜೊತೆಗೆ ಹಳ್ಳಿ ಜನರ ಮುಗ್ಧತೆ, ಸಂಸ್ಕ್ರತಿ, ಸೊಗಡು ಎಲ್ಲವನ್ನೂ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇನ್ನು ರಂಗಭೂಮಿ ಪ್ರತಿಭೆ ದೇವನೂರು ಚಂದ್ರು ಈ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅಮೃತಾ ಅಯ್ಯರ್ ಅವರು ನಾಯಕಿಯಾಗಿ ಮಿಂಚ್ತಿದ್ದಾರೆ. ಇನ್ನು ಎನ್ಎಲ್ಎನ್ ಸಂಸ್ಥೆ ನಿರ್ಮಾಣ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಭಿಷೇಕ್ ಜಿ. ಕಾಸರಗೋಡು ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
ಸಿಕ್ಸ್ತ್ ಸೆನ್ಸ್ ಸೀನನಾಗಿ ವಿನಯ್ ಲುಕ್ಕು, ಖದರ್ರು, ವಿಲೇಜ್ ಬ್ಯಾಕ್ಡ್ರಾಪ್ ಎಲ್ಲಾ ನೋಡುತ್ತಿದ್ದರೆ, ತೆಲುಗಿನ ರಂಗಸ್ಥಳಂ ಸಿನಿಮಾವನ್ನು ನೆನಪಿಸುವಂತಿದೆ. ಒಟ್ಟಾರೆಯಾಗಿ ವಿನಯ್ ರಾಜ್ಕುಮಾರ್ ಅವರು ಹಿಂದಿನ ಮೂರು ಸಿನಿಮಾಗಳಿಗಿಂತ ಗ್ರಾಮಾಯಣ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚ್ತಿದ್ದು, ಹುಟ್ಟುಹಬ್ಬದ ದಿನ ರಿಲೀಸ್ ಆಗಿರೋ ಟೀಸರ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.