ಉತ್ತರ ಕನ್ನಡ: ಕೃಷಿ, ತೋಟಗಾರಿಕಾ ಬೆಳೆಗಳನ್ನು ರೈತರು ಹೊರರಾಜ್ಯಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಶನಿವಾರ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಳೆ ಹಾಳಾಗದಂತೆ ಮಾರಾಟಕ್ಕೆ ಅನುಮತಿ ನೀಡಲು ಎಸ್ಪಿ, ಡಿಸಿಗೆ ಸೂಚನೆ ನೀಡಲಾಗಿದೆ. ಪಪ್ಪಾಯಿ, ಕಲ್ಲಂಗಡಿ, ಅನನಾಸು ಮಾರಾಟಕ್ಕೆ ತಯಾರಿದ್ದು, ಮಾರುಕಟ್ಟೆಯ ಸ್ವಲ್ಪ ಸಮಸ್ಯೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಇನ್ನು ಜಿಲ್ಲೆಯಲ್ಲಿ 3,427 ಜನರು ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಹಾಕಿದ್ದಾರೆ. 3 ತಿಂಗಳ ಕಾಲ ಅರ್ಜಿದಾರರಿಗೂ ರೇಷನ್ ನೀಡುವ ವ್ಯವಸ್ಥೆ ಕ್ಯಾಬಿನೆಟ್ನಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸದ್ಯ ಶಿರಸಿ, ಸಿದ್ಧಾಪುರದಲ್ಲಿ 4 ಜನರಿಗೆ ಮಂಗನ ಕಾಯಿಲೆ ಪೊಸಿಟಿವ್ ಇದೆ. ಚಿಕಿತ್ಸೆಗಾಗಿ ರೋಗಿಗಳನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದ್ದು ಜೊತೆಗೆ ಮಂಗನ ಕಾಯಿಲೆ ತಡೆಯಲು ಆರೋಗ್ಯ ಇಲಾಖೆಗೆ ವಿಶೇಷ ಸೂಚನೆ ನೀಡಲಾಗಿದೆ. ಮೆಡಿಸಿನ್ ಅಗತ್ಯವಿದ್ದದ್ದು ಪಂಚಾಯ್ತಿಯಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಪಿಡಿಒಗಳು ಗ್ರಾ. ಪಂ. ಅಗತ್ಯ ಮೆಡಿಸಿನ್ ಪೂರೈಕೆ ವ್ಯವಸ್ಥೆಗೆ ಸೂಚನೆ ನೀಡಿದ್ದೇನೆ ಎಂದು ಅವರು ನುಡಿದರು.
ಕೃಷಿ ಯಂತ್ರೋಪಕರಣಗಳಿಗೆ ಡೀಸೆಲ್ ಅವಶ್ಯಕತೆಗೆ ಪಿಡಿಒಗಳ ಮೂಲಕ ಡಿಸೇಲ್ ಪೂರೈಕೆ. 1,423 ಜನರು ನಾಳೆಗೆ 28 ದಿನದ ಕ್ವಾರಂಟೈನ್ ಪೂರೈಸುತ್ತಿದ್ದಾರೆ. 9 ಸೋಂಕಿತರ ಪೈಕಿ 3 ಜನರು ಗುಣಮುಖರಾಗಿದ್ದು ನಿಗಾದಲ್ಲಿದ್ದಾರೆ. ಉಳಿದ 6 ಜನರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೋಂಕಿತ ಗರ್ಭಿಣಿ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಖುದ್ದಾಗಿ ಮುಖ್ಯಮಂತ್ರಿಗಳೇ ಆಸ್ಪತ್ರೆಗೆ ಕರೆ ಮಾಡಿ ಉತ್ತಮ ಚಿಕಿತ್ಸೆಗೆ ನಿರ್ದೇಶಿಸಿದ್ದಾರೆ. ಆಕೆಯ ಕುಟುಂಬದ 5 ಜನರ ಗಂಟಲಿನ ದ್ರವ ಹಾಗೂ ರಕ್ತ ಪರೀಕ್ಷೆ ಕೂಡಾ ನಡೆಸಲಾಗಿದ್ದು, ಫಲಿತಾಂಶ ಬರಬೇಕಿದೆ. ಗೋವಾದಲ್ಲಿರುವ ಜಿಲ್ಲೆಯ ಕನ್ನಡಿಗರಿಗೆ ಎಲ್ಲಾ ವ್ಯವಸ್ಥೆ ಮಾಡಲು ಅಲ್ಲಿನ ಸಿಎಂ ಜತೆ ಮಾತನಾಡಲಾಗಿದೆ. ಅಗತ್ಯ ಚಿಕಿತ್ಸೆ, ಆಹಾರ ಹಾಗೂ ಇತರ ಸೌಲಭ್ಯಕ್ಕೆ ಹಣ ಬಿಡುಗಡೆ ಮಾಡಲೂ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ವೈದ್ಯ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಜಿಲ್ಲೆಯ ಜನರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಬೇಕು. ಕೊರೊನಾಕ್ಕೆ ಹೆದರಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾಗಲೂ ಜನರಿಗೆ ಚಿಕಿತ್ಸೆ ನೀಡದಿರಬೇಡಿ. ಗಂಭೀರ ಸಮಸ್ಯೆ ಕಾಣಿಸಿಕೊಂಡರೆ ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಿ. ವೈದ್ಯರು ತಮ್ಮ ವೃತ್ತಿ ಧರ್ಮ ಪಾಲಿಸಬೇಕೇ ಹೊರತು ಕ್ಲಿನಿಕ್ ತೆರೆದಿರಿಸದೆ ಚಿಕಿತ್ಸೆ ನೀಡದೇ ಇರಬೇಡಿ ಎಂದು ಸಚಿವ ಶಿವರಾಮ ಹೆಬ್ಬಾರ್ ಅವರು ವೈದ್ಯರಲ್ಲಿ ಮನವಿ ಮಾಡಿದರು.