Thursday, May 19, 2022

'ಮೃತ ದೇಹದಿಂದ ವೈರಸ್ ಹರಡುತ್ತೆ ಅಂತ ಯಾವ ಮೆಡಿಕಲ್​ ಸೈನ್ಸ್ ಕೂಡ​​ ಹೇಳಿಲ್ಲ'

Must read

ದಕ್ಷಿಣಕನ್ನಡ: ಕೋವಿಡ್ 19 ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಭಾಗಿ ಹಿನ್ನೆಲೆ ಮಾಜಿ ಸಚಿವ ಯು.ಟಿ ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದು, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಬಂತು ಹಾಗಾಗಿ ಭಾಗಿಯಾಗಿದ್ದೇನೆ ಎಂದು ಅವರು ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸೋಂಕಿತನ ಮೃತದೇಹದಿಂದ ವೈರಸ್ ಹರಡೋದಿಲ್ಲ. ಮೃತ ದೇಹದಿಂದ ವೈರಸ್ ಹರಡುತ್ತೆ ಅಂತಾ ವೈದ್ಯಕೀಯ ಅಧ್ಯಯನ ಹೇಳಿಲ್ಲ. ಹಾಗಾಗಿ ಪಿಪಿಐ ಕಿಟ್​ನ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಇನ್ನು ಮಕ್ಕಳು ತಂದೆಯ ಹೆಣವನ್ನು ನೋಡೋಕೆ ಬರಲ್ಲ. ಜನ ಅಷ್ಟು ಭಯ ಭೀತರಾಗಿದ್ದಾರೆ. ಧಾರ್ಮಿಕ ವಿಧಿವಿಧಾನ ಮಾಡೋಕೆ ಜನರಿಗೆ ಹೆದರಿಕೆಯಿದೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೇ ಇರೋದು ತಪ್ಪು. ಆದರೆ, ಜನರಿಗೆ ಮನವರಿಕೆ ಮಾಡಲು ನಾನು ಧರಿಸಿಲ್ಲ. ಜನರು ಧಾರ್ಮಿಕ ವಿಧಿ-ವಿಧಾನ ಪ್ರಕಾರ ಅಂತ್ಯಕ್ರಿಯೆ ಮಾಡಬಹುದು ಎಂದು ಯು.ಟಿ ಖಾದರ್ ನುಡಿದರು.

ಅದುವಲ್ಲದೇ, ಮುಂದಿನ ಮೂರು ತಿಂಗಳು ಬಹಳ ಸವಾಲಿನ ತಿಂಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ವ್ಯವಸ್ಥೆ ಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಜನರಿಗೆ ಎಲ್ಲಾ ಅಂಗಡಿಗಳನ್ನು ತೆರೆಯಬೇಕಾಗಿಲ್ಲ, ಅಗತ್ಯ ಅಂಗಡಿಗಳನ್ನು ಮಾತ್ರ ತೆರೆಯಬಹುದು. ಜನರಿಗೆ ಈ ಬಗ್ಗೆ ಜಿಲ್ಲಾಡಳಿತ ಮನವರಿಕೆ ಮಾಡಬೇಕು. ಮಂಗಳೂರಿನಲ್ಲಿ ಮೀನುಗಾರಿಕಾ ಬಂದರು ಬಂದ್ ಮಾಡಲಾಗಿದೆ. ಈಗ ಎಲ್ಲಾ ಕಡೆ ರಸ್ತೆಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.

ನಾಳೆ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ವಿಚಾರದ ಕುರಿತು ಮಾತನಾಡಿದ ಅವರು, ಸರ್ಕಾರ ಮುಂಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಶಾಲೆಯ 50 ಮೀಟರ್ ಸುತ್ತಾ ಸಂಪೂರ್ಣ ಬಂದ್ ಮಾಡಬೇಕು. ವಿದ್ಯಾರ್ಥಿಗಳನ್ನು ಕರೆತರುವ ಹೆತ್ತವರ ಬಗ್ಗೆಯೂ ಗಮನಹರಿಸಬೇಕು. ಶಾಲೆಗೆ ಸ್ಯಾನಿಟೈಸೇಷನ್ ಮಾಡುವ ಹೊಣೆಯನ್ನು ಗ್ರಾಮ ಪಂಚಾಯ್ತಿಗೆ ಕೊಟ್ಟಿದ್ದಾರೆ. ಆರೋಗ್ಯ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಸೆಲೂನ್​ನಲ್ಲಿ ಬಳಸುವ ಸ್ಟ್ರೇ ಬಳಸಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದು ಮಂಗಳೂರಿನಲ್ಲಿ ಯು.ಟಿ ಖಾದರ್ ಮಾತನಾಡಿದ್ದಾರೆ.

Latest article