ಮಂಗಳೂರು: ಮಾತೃ ಭಾಷೆ ಎನ್ನುವುದನ್ನು ನಾವು ಯಾವತ್ತೂ ಮರೆಯ ಬಾರದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದರು.
ಮಂಗಳೂರಿನ ಎನ್ಐಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯ್ನಾಡಿನ ಮಾತೃಭಾಷೆ ನಮ್ಮನ್ನು ರಕ್ಷಿಸುವ ಹೆಮ್ಮೆಯ ಭಾಷೆ. ನಿಮ್ಮ ಮಾತೃ ಭಾಷೆಯಲ್ಲಿ ಮಾತನಾಡಲು ಯಾವತ್ತಿಗೂ ಹೆಮ್ಮೆ ಪಡಿ. ಮಾತೃಭಾಷೆ ಎನ್ನುವುದು ಕಣ್ಣಿದ್ದಂತೆ, ಬೇರೆ ಭಾಷೆಗಳು ಕನ್ನಡಕ ಇದ್ದಂತೆ ಎಂದು ಅವರು ಮಾತೃಭಾಷೆ ಮಹತ್ವದ ಬಗ್ಗೆ ಸರಳವಾದ ಉದಾಹರಣೆ ಕೊಡುವ ಮೂಲಕ ಅವರು ತಿಳಿಸಿದರು.
ಇನ್ನು ಮಕ್ಕಳು ತಮ್ಮ ಸ್ಥಳೀಯ ಮಾತೃ ಭಾಷೆಯಲ್ಲಿಯೇ ಮಾತನಾಡಲು ಕಲಿಯಬೇಕು. ಸರ್ಕಾರ ಕೂಡ ಪ್ರೌಢಶಾಲೆಯವರೆಗೂ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ನಾನು ಬೇರೆ ಭಾಷೆಗಳ ವಿರೋಧಿಯಲ್ಲ. ಆದರೆ, ಮಾತೃ ಭಾಷೆಗೆ ಮೊದಲ ಆದ್ಯತೆ ಎಂದರು.
ಬೇರೆ ಭಾಷೆಗಳಾದ ಹಿಂದಿ, ಇಂಗ್ಲೀಷ್, ಫ್ರೆಂಚ್, ಚೈನೀಸ್ ಇರಲಿ ಸಮಸ್ಯೆ ಇಲ್ಲ. ಆದರೆ, ಮೊದಲ ಆದ್ಯತೆ ನಿಮ್ಮ ಮಾತೃ ಭಾಷೆಗೆ ಇರಲಿ. ಮಾತೃ ಭಾಷೆಯನ್ನು ರಕ್ಷಿಸಿ ನಮ್ಮ ಸಂಸ್ಕೃತಿ ಉಳಿಸಬೇಕು. ಅದೇ ರೀತಿ ನಿಮ್ಮ ಭಾಷೆಯ ಮೇಲೆ ಹೆಮ್ಮೆ ಇರಲಿ ಆದರೆ ಬೇರೆ ಭಾಷೆ ಬಗ್ಗೆ ತಾತ್ಸಾರ ಬೇಡ ಎಂದು ವೆಂಕಯ್ಯ ನಾಯ್ಡು ಅವರು ಮಾತನಾಡಿದ್ದಾರೆ.