ವಿಜಯಪುರ: ಕೇಂದ್ರ ಸಚಿವರು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗದೇ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ ಅವರು ಗುರುವಾರ ಬಿಜೆಪಿ ಸಂಸದರಿಗೆ ಕಿವಿಮಾತು ನೀಡಿದರು.
ಇನ್ನುವರೆಗೂ ಕೇಂದ್ರ ಸರ್ಕಾರವು ನೆರೆ ಪರಿಹಾರವನ್ನು ಕೊಡದೆ ಇರುವುದನ್ನು ಖಂಡಿಸಿ ಮಾತನಾಡಿದ ಅವರು, ಸಂಸದರಾದ ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ ಪ್ರಧಾನಿಯವರ ಭೇಟಿಗೆ ಅವಕಾಶ ನೀಡಿ, ಪರಿಹಾರ ಒದಗಿಸಲು ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಸಹ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಹೇಳಿರುವುದರಲ್ಲಿ ತಪ್ಪೇನಿಲ್ಲ? ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ ಎಂದು ಅವರು ನುಡಿದರು.
ಇಲ್ಲಿ ಯಾರೂ ಯಾರಿಗೂ ಭಯ ಪಡಬಾರದು. ಪ್ರಧಾನಿ ನರೇಂದ್ರ ಮೋದಿ ಯಾರನ್ನೂ ಹೆದರಿಸುವವರಲ್ಲ. ಅವರೂ ಗುಜರಾತ್ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ. ಮಂತ್ರಿಯಾಗಲು, ಮುಂದಿನ ಬಾರಿ ಟಿಕೆಟ್ಗಾಗಿ ಸಂಸದರು ಮೌನ ವಹಿಸುವುದು ಸರಿಯಲ್ಲ ಎಂದರು.
ಒಬ್ಬರು ಹುಬ್ಬಳ್ಳಿಯಲ್ಲಿ ಮತ್ತೋಬ್ಬರು ಬೆಂಗಳೂರಿನಲ್ಲಿ ಕುಳಿತಿದ್ದೀರಿ? ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ, ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ. ಕೇಂದ್ರದಿಂದ 10000 ಕೋಟಿ ಪರಿಹಾರ ತರಲಿ ಎಂದು ಯತ್ನಾಳ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆಯ ಸಿಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೇನೂ ಸಚಿವನಾಗಬೇಕಿಲ್ಲ. ಸಚಿವ ಸ್ಥಾನಕ್ಕಾಗಿ ನಾನೇನು ಯಾರ ಕಾಲನ್ನು ಹಿಡಿದಿಲ್ಲ. ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತಿರುಗಿ ಕಟ್ಟಿದವರು ನಾವು. ಇವರಂಥೆ ನಾನು ಸುಸಜ್ಜಿತ ಮನೆಯಲ್ಲಿ ಬಂದು ಕೂತಿಲ್ಲ ಎಂದು ಅವರು ಸಿ.ಟಿ ರವಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಅನಂತಕುಮಾರ, ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅನಂತಕುಮಾರ ಬದುಕಿದ್ದರೆ ಇಂದು ರಾಜ್ಯದಲ್ಲಿ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅನಂತಕುಮಾರ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಒಂದು ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ ಎಂದು ಯತ್ನಾಳ ಅವರು ಸಂಸದರ ಮೇಲೆ ಹರಿಹಾಯ್ದರು.
ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ, ಇನ್ನು ನಮ್ಮನ್ನೇನು ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿಸುತ್ತಾರೆ? ಅಲ್ಲದೇ, ಶಿವರಾಜ ತಂಗಡಗಿ ಹೇಳಿಕೆ ಬಗ್ಗೆ ಮಾತನಾಡಿ ಅವರು ಹಾಗೆ ಮಾತನಾಡಿದ್ದು ಸರಿಯಲ್ಲ ಎಂದರು. ಕೇಂದ್ರದ ವಿರುದ್ಧ ರಾಜ್ಯದ ಜನರ ಆಕ್ರೋಶದ ಬಗ್ಗೆ ಕೇಂದ್ರ ಇಂಟಲಿಜೆನ್ಸ್ ಪ್ರಧಾನಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ರೈಲು ಎಂಜಿನ್ಗಳಾಗಿ ಮುಂದೆ ಹೋಗಲಿ ನಾವು ಡಬ್ಬಿಗಳಾಗಿ ರೈಲನ್ನು ಹಿಂಬಾಲಿಸುತ್ತೇವೆ. ಪ್ರಧಾನಿ ಭೇಟಿಗೆ ಅನುಮತಿ ಕೋರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಪ್ರಧಾನಿ ಸಮಯ ನೀಡಿದರೆ ಭೇಟಿ ಮಾಡುತ್ತೇನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ನನ್ನ ಜೊತೆ ಬರುವುದಾದರೆ ಬರಬಹುದು ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.