ಬೆಂಗಳೂರು: ನಾನು ಆಸ್ತಿ, ಹಣ ಸಂಪಾದನೆ ಮಾಡಲು ರಾಜಕೀಯ ಮಾಡಲು ಬಂದಿಲ್ಲ. ಜನರಿಗೆ ಸೇವೆ ಮಾಡಬೇಕುನ್ನುವ ಸೇವೆಯ ಮನೋಭಾವ ನನ್ನದು ಎಂದು ಹೊಸಕೋಟೆ ಬಿಜೆಪಿ ಟಿಕೇಟ್ ಆಕಾಂಕ್ಷಿ ಶರತ್ ಬಚ್ಚೆಗೌಡ ಅವರು ಗುರುವಾರ ಹೇಳಿದರು.
ತಾಲೂಕಿನ ಬೆಂಡಿಗಾನಹಳ್ಳಿಯ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ರೌಡಿಗಳು ಗಲಾಟೆಗಳು ಮಾಡುವವರು ಅಂತ ನಮ್ಮ ಮೇಲೆ ಆರೋಪ ಮಾಡ್ತಾರೆ. ನಮಗೆ ಇಂದು ಸಹ ಸಾಕಷ್ಟು ಆಸೆ ಆಮಿಷಗಳು ಬರುತ್ತಿವೆ. ಆದ್ರೆ ನಾವು ಅದಕ್ಕೆಲ್ಲ ಸೋಪ್ಪು ಹಾಕಲ್ಲ ಎಂದರು.
ಇದೇ ತಿಂಗಳ 30 ರಂದು ನಾನು ನಾಮಿನೇಷನ್ ಮಾಡುತ್ತೇನೆ. ಮೊದಲ ಆದ್ಯತೆ ಬಿಜೆಪಿ ಪಕ್ಷಕ್ಕೆ, ಅಲ್ಲಿಂದ ಪ್ರತಿಕ್ರಿಯೆ ಏನಾದ್ರು ಬರಲಿಲ್ಲ ಅಂದ್ರೆ ಬೇರೆ ಯಾವುದಾದರೂ ಪಕ್ಷದಿಂದ ನಾಮಿನೇಷನ್ ಸಲ್ಲಿಸುತ್ತೇನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಂತು ಶತಸಿದ್ದ. ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಇನ್ನೂ ರಾಜಕಾರಣದಲ್ಲಿ 2 ರೀತಿಯ ರಾಜಕಾರಣಿಗಳು ಇರುತ್ತಾರೆ. ಅದರಲ್ಲಿ ಒಂದು ಹುಲಿ ಸಿಂಹ ಮತ್ತೊಂದು ನರಿ ಮತ್ತು ಗುಳ್ಳೆನರಿಯಂತಹ ರಾಜಕಾರಣಿಗಳು ಇರುತ್ತಾರೆ. ಇದು ರಾಜಕಾರಣದ ತಂತ್ರಗಾರಿಕೆ ಎಂದು ಪರೋಕ್ಷವಾಗಿ ಶರತ್ ಬಚ್ಚೇಗೌಡ ಅವರು ಎಂ.ಟಿ ನಾಗರಾಜ್ ವಿರುದ್ಧ ಗುಡುಗಿದರು.
ಈ ಕ್ಷೇತ್ರದಲ್ಲಿ 2004 ರವರೆಗೂ ಸಿಂಹಗಳು ಹುಲಿಗಳಂತಿದ್ದ ಕ್ಷೇತ್ರ ಇದು. 2004 ರ ನಂತರ ಸಿಂಹಗಳ ಎದುರಿಗೆ ಗುಳ್ಳೆನರಿಗಳು ಬಂದು ನಿಂತುಕೊಂಡು ಕ್ಷೇತ್ರದ ರಾಜಕಾರಣ ಹಾಳು ಮಾಡಿದರು ಎಂದು ಶರತ್ ಬಚ್ಚೇಗೌಡ ಅವರು ಎಂಟಿಬಿ ಅವರನ್ನು ಗುಳ್ಳೆನರಿಗೆ ಹೋಲಿಸಿದರು.
