ಅನಂತು ವರ್ಸಸ್ ನುಸ್ರತ್ ಸಿನಿಮಾ ನಂತರ ವಿನಯ್ ರಾಜ್ಕುಮಾರ್ ಅಭಿನಯದ ಸಿನಿಮಾ ಟೆನ್. ಕರಮ್ ಚಾವ್ಲಾ ಆ್ಯಕ್ಷನ್ ಕಟ್ ಹೇಳಿರೋ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ಅಣ್ಣಾವ್ರ ಮೊಮ್ಮಗ ಬಾಕ್ಸರ್ ಅವತಾರದಲ್ಲಿ ಅಖಾಡಕ್ಕಳಿದಿದ್ದಾರೆ. ಭರವಸೆ ಮೂಡಿಸಿರೋ ಟೆನ್ ಸಿನಿಮಾದ ಟೀಸರ್.
ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳಲ್ಲಿ ನಟಿಸ್ತಾ ಬರ್ತಿದ್ದು, ಇದೀಗ ಬಾಕ್ಸರ್ ಅವತಾರದಲ್ಲಿ ಪ್ರೇಕ್ಷಕರನ್ನ ರಂಜಿಸೋಕ್ಕೆ ಸಿದ್ಧರಾಗಿದ್ದಾರೆ. ವಿನಯ್ ಅಭಿನಯದ ನಾಲ್ಕನೇ ಸಿನಿಮಾ ಟೆನ್. ಕರಮ್ ಚಾವ್ಲಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ಧಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಟೆನ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ನಾಯಕಿಯಾಗಿ ಮಿಂಚಿದ್ದಾರೆ. ವಿನಯ್ ಬಾಕ್ಸರ್ ಪಾತ್ರಕ್ಕಾಗಿ ದೇಹವನ್ನ ಹುರಿಗೊಳಿಸಿ, ಖಡಕ್ ಲುಕ್ನಲ್ಲಿ ದರ್ಶನ ಕೊಟ್ಟಿದ್ಧಾರೆ. ಟೀಸರ್ ನೋಡಿದ್ರೆ, ಬಾಕ್ಸರ್ ಒಬ್ಬನ ಏಳುಬೀಳಿನ ಕಥೆಯನ್ನ ಚಿತ್ರದಲ್ಲಿ ಹೇಳ್ತಿರೋದು ಗೊತ್ತಾಗ್ತಿದೆ.
ಗೋಪಾಲ ಕೃಷ್ಣ ದೇಶ್ಪಾಂಡೆ ಚಿತ್ರದಲ್ಲಿ ಬಾಕ್ಸಿಂಗ್ ಕೋಚ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 35 ಸೆಕೆಂಡ್ಗಳ ಟೆನ್ ಸಿನಿಮಾ ಟೀಸರ್ ಮೊದಲ ನೋಟದಲ್ಲೇ ಸಿನಿಮಾ ಮೇಲೆ ಭರವಸೆ ಮೂಡುವಂತೆ ಮಾಡಿದೆ. ಕ್ಲೀನ್ ಶೇವ್, ಕುರುಚಲು ಗಡ್ಡ, ದಟ್ಟವಾದ ಗಡ್ಡ ಹೀಗೆ ಬೇರೆ ಬೇರೆ ಶೇಡ್ಗಳಲ್ಲಿ ವಿನಯ್ ರಾಜ್ಕುಮಾರ್ ದರ್ಶನ ಕೊಟ್ಟಿದ್ದಾರೆ.
ಬಹುತೇಕ ಶೂಟಿಂಗ್ ಮುಗಿಸಿರೋ ಟೆನ್ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಗಮನ ಸೆಳೆದಿದೆ. ಚಿತ್ರಮಂದಿರಗಳೆಲ್ಲಾ ಬಂದ್ ಆಗಿದ್ದು, ಯಾವಾಗ ಓಪನ್ ಆಗುತ್ತೆ ಅನ್ನೋದು ಗೊತ್ತಿಲ್ಲ. ಸೆಪ್ಟೆಂಬರ್ ವೇಳೆಗೆ ವಿನಯ್ ತೆರೆಮೇಲೆ ಬಾಕ್ಸಿಂಗ್ ಪಂಚ್ ಕೊಡಲಿದ್ದಾರೆ.