ವಿಜಯಪೂರ: ಪ್ರವಾಹ ಹಾನಿ ಕುರಿತು ರಾಜ್ಯದ ಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿಸ್ಕರಿಸಿದೆ ಎಂಬ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ವರದಿ ತಿರಸ್ಕಾರ ಆಗಲಿ ಬಿಡಲಿ ಕೇಂದ್ರ ಸರ್ಕಾರ ಮೊದಲು ರಾಜ್ಯದ ಪ್ರವಾಹ ಸಂತ್ರಸ್ಥರಿಗೆ ತಕ್ಷಣ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಪ್ರವಾಹ ಹಾನಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿದೆ ಎಂಬುದಕ್ಕಿಂತ ತಕ್ಷಣ ಪರಿಹಾರ ಹಣ ಬಿಡುಗಡೆ ಮಾಡುವುದು ಸೂಕ್ತ. ವರದಿ ಏನಾದರೂ ಸುಡುಗಾಡು ಆಗಲಿ, ಬಳಿಕ ಬೇಕಾದರೆ ರಾಜ್ಯದ ವರದಿಯನ್ನು ಸಮಾಧಾನ ಆಗುವವರೆಗೂ ಪರಿಶೀಲನೆ ಮಾಡಲಿ ಎಂದರು.
ಅಲ್ಲದೇ ಕೇಂದ್ರ ಗೃಹ ಸಚಿವರು ಹಾಗೂ ವಿತ್ತ ಮಂತ್ರಿಗಳು ಆಗಮಿಸಿ ಪ್ರವಾಹ ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ಸಂತ್ರಸ್ತರ ಕಣ್ಣೀರನ್ನು ಸ್ವತಃ ನಿರ್ಮಲಾ ಸೀತಾರಾಮನ್ ಅವರು ಕಣ್ಣಾರೇ ಕಂಡು ಹೋಗಿದ್ದಾರೆ. ಇನ್ನು ವರದಿಯ ಕುರಿತು ಅಧಿಕಾರಿಗಳ ಮಾತು ಕೇಳುವ ಅವಶ್ಯಕತೆ ಏನಿದೆ ಎಂದ ಯತ್ನಾಳ್ ಪ್ರಶ್ನಿಸಿದರು.
ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ಸಹ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಇಷ್ಟಾದರೂ ಹಾನಿಯ ವರದಿಯ ಹಿಡಿದು ಪರಿಹಾರ ಮಾಡಿದೇ ಇರುವ ಅರ್ಥದಲ್ಲಿ ಅವರು ಮಾತನಾಡಿದರು. ಇದೇ ವೇಳೆ ಪ್ರವಾಹ ಸಂತ್ರಸ್ಥರಿಗೆ ನೀಡಲು ಹಣವಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಸಿಎಂ ಬಿಎಸ್ವೈ ಹೇಳಿಕೆ ಕುರಿತು ಮಾತನಾಡಿದ ಯತ್ನಾಳ್ ಹಿಂದೆ ಸರ್ಕಾರ ನಡೆಸಿದವರು ಬೇಕಾ ಬಿಟ್ಟಿಯಾಗಿ ರೈತರ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ ಎಂದು ಅವರು ನುಡಿದಿದ್ದಾರೆ.
ಇದೇ ವಿಚಾರವಾಗಿ ಸಿಎಂ ಅವರು ಇಂದು ಬೆಳಿಗ್ಗೆ ದೂರವಾಣಿಯಲ್ಲಿ ಮಾತನಾಡಿದ್ಧಾರೆ. ಯಾವುದೇ ಹಣಕಾಸಿನ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ತನ್ನ ಸಿಮೀತ ಕೆಲಸ ಮಾಡಲು ಹಣ ಇದೆ ಎಂದಿದ್ದಾರೆ. ಆದರೆ ಪ್ರವಾಹದಿಂದ ಉಂಟಾದ ಎಲ್ಲಾ ಹಾನಿಗೆ ನೀಡುವಷ್ಟು ಹಣ ಇಲ್ಲ ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆ. ಅಲ್ಲದೇ ನೆರೆ ಪೀಡಿತ ಪ್ರದೇಶದಲ್ಲಿ ಸ್ಥಳಿಯ ಶಾಸಕರ ಮೇಲೆ ಸಂತ್ರಸ್ಥರ ಒತ್ತಡವಿದೆ ಎಂದು ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.