ಬಾಗಲಕೋಟೆ: ಬಿಜೆಪಿ ಪಕ್ಷವೇ ಇರಲಿ, ವಿರೋಧ ಪಕ್ಷವೆ ಇರಲಿ. ಯಡಿಯೂರಪ್ಪ ಅವರನ್ನು ಯಾರು ಏನು ಮಾಡಲು ಆಗಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರು ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಉಳಿದ ಮೂರು ವರ್ಷ ಯಡಿಯೂರಪ್ಪ ಸಿಎಂ ಆಗಿಯೆ ಇರುತ್ತಾರೆ. ಯಾರು ಏನೇ ಮಾಡಿದ್ರೂ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಇನ್ನು ಕೆಲವೊಂದಷ್ಟು ನಾಯಕರು ಕೆಳಗೆ ಇಳಿಸುತ್ತೇವೆ ಎಂಬ ಭ್ರಮಾಲೋಕದಲ್ಲಿ ಇದ್ದಾರೆ ಅಷ್ಟೆ ಎಂದು ಅವರು ನುಡಿದರು.
ಅಲ್ಲದೇ ತಮಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮಾತನಾಡಿ, ನಾನು ಸಚಿವ ಸ್ಥಾನವನ್ನು ಆಪೇಕ್ಷ ಪಟ್ಟಿಲ್ಲ. ಆಡಳಿತ ಪಕ್ಷದ ಶಾಸಕನಾಗಿದ್ದೇನೆ ಎಂಬ ಹೆಮ್ಮೆ ನನಗಿದೆ. ಈ ಚುನಾವಣೆ ನಂತರ ಯಡಿಯೂರಪ್ಪ ಅವರು ಮತ್ತಷ್ಟು ಗಟ್ಟಿಯಾಗಿ ಇರುತ್ತಾರೆ. ರಾಜ್ಯದಲ್ಲಿ ಯಾವ ಪಕ್ಷದ ಶಾಸಕನಿಗೂ ಚುನಾವಣೆ ಬೇಕಾಗಿಲ್ಲ ಎಂದರು.
ಅಂತೆಯೇ ಮಾತನಾಡಿದ ಅವರು, ಜೆಡಿಎಸ್ನ ಅನೇಕ ಶಾಸಕರು ಬಿಜೆಪಿಗೆ ಬರಲು ತುದಿಗಾಲ ಮೇಲೆ ಇದ್ದಾರೆ. ನನ್ನ ಸಂಪರ್ಕದಲ್ಲೆ ಇಬ್ಬರು ಶಾಸಕರು ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಅವರು ಇದೇ ಸಂದರ್ಭದಲ್ಲಿ ಹೊಸ ಬಾಂಬ್ ಸಿಡಿಸಿದರು.