ಮೈಸೂರು/ರಾಮನಗರ: ನೆರೆ ಪರಿಹಾರ ನೀಡಲು ಬೊಕ್ಕಸ ಖಾಲಿಯಾಗಿದೆ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಯಾವ ಬೊಕ್ಕಸ ರಾಜ್ಯ ಸರ್ಕಾರದ್ದೋ ಅಥವಾ ಅವರ ಕುಟುಂಬದ್ದೋ ಅಂತ ಹೇಳಬೇಕು ಅಲ್ವಾ(?) ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಮಾಜಿ ಮುಖ್ಯಮಂತ್ರಿ, ರಾಜ್ಯದ ನೆರೆ ಹಾಳಿಗೆ ಸಂಬಂಧಿಸಿದಂತೆ, ವಿರೋಧ ಪಕ್ಷಗಳ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಅವರಂತೆ ನೀವು ಮಾತನಾಡಬೇಡಿ ಅಂತ ಯಡಿಯೂರಪ್ಪ ಅವರ ಶಾಸಕ, ಸಚಿವರಿಗೆ ಹೇಳಿದ್ದಾರೆ. ನಾನು 14 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಬೊಕ್ಕಸ ಸಂಪದ್ಭರಿತವಾಗಿದ್ದು ಯಾವುದೇ ಕೇಂದ್ರದ ಸಹಾಯಾಚನೆ ಮಾಡದೇನೆ ರಾಜ್ಯ ಸರ್ಕಾರ ನೆರೆಪರಿಹಾರ ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ಇನ್ನು ನನ್ನ ಅವಧಿಯಲ್ಲಿ ಕೇಂದ್ರದ ಜೊತೆ ಸಾಮರಸ್ಯ ಇತ್ತು. ನೆರೆ ಬಂದಾಗ ಪ್ರಧಾನಿ ಫೋನ್ ಮಾಡಿ ವಿಚಾರಿಸಿಕೊಂಡಿದ್ದರು. ಆದರೆ, ಯಡಿಯೂರಪ್ಪ ಅವರಿಗೆ ಮೋದಿ ಭೇಟಿ ಮಾಡಲು ಆಗುತ್ತಿಲ್ಲ, ಮೋದಿ ಹಾಗೂ ಬಿಎಸ್ವೈ ನಡುವೆ ಸಾಮರಸ್ಯ ಇಲ್ಲ ಎಂಬುದು ಸ್ಪಷ್ಟವಾಗಿದೆ. ಸಂಸದರ ಬಗ್ಗೆ ಕೂಡ ನಾನು ಏನೂ ಮಾತಾಡಲ್ಲ, ಕನಿಷ್ಠ ಮುಖ್ಯಮಂತ್ರಿ ಸರ್ವಪಕ್ಷ ಸಭೆಯಾದರೂ ಕರೆಯಲಿ ಎಂದರು.
ಅಂತೆಯೇ ಸರ್ವಪಕ್ಷ ಸಭೆ ಕರೆದರೆ ನಾನು ಪರಿಹಾರ ಕಾರ್ಯಕೈಗೊಳ್ಳುವ ಬಗ್ಗೆ ಸಲಹೆ ನೋಡುತ್ತೇನೆ. ಆದರೆ, ಬಿಎಸ್ ಯಡಿಯೂರಪ್ಪ ಅವರ ಸಣ್ಣತನದಿಂದಾಗಿ ಸಭೆ ಕರೆಯುತ್ತಿಲ್ಲ, ಕೇಂದ್ರದ ನೆರವಿಲ್ಲದೆ ರಾಜ್ಯ ಸರ್ಕಾರ ನೆರೆ ಪರಿಹಾರ ನೀಡಬಹುದು. ಉದಾಹರಣೆಗೆ ಕಳೆದ ಎರಡು ಬಜೆಟ್ನಲ್ಲಿ ಸಾಲಮನ್ನಾ ಮಾಡಲು ಜಾರಿಗೆ ತಂದ ಬಜೆಟ್ನಲ್ಲಿ 25 ಸಾವಿರ ಕೋಟಿ ಇಟ್ಟಿದ್ದೆ. ಅದರಲ್ಲಿ ಇನ್ನೋ ಐದಾರು ಸಾವಿರ ಕೋಟಿ ಉಳಿದಿದೆ ಎಂದು ಅವರು ಸಲಹೆ ಕೊಟ್ಟರು.
ಸದ್ಯ ವಿಜೆಯೇಂದ್ರನನ್ನು ಬಿಜೆಪಿ ನಾಯಕ ಅಂತ ಬಿಂಬಿಸಿಕೊಂಡು ಹೊರಟಿದ್ದಾರೆ. ಅವನು ಬೊಕ್ಕಸ ಖಾಲಿಯಾಗಿದೆ ಅಂತಾನೆ. ಪಾಪ ಅವನಿಗೇನು ಗೊತ್ತು ಬಹುಶಃ ಅವರ ಬೊಕ್ಕಸ ಖಾಲಿಯಾಗಿದೆ. ಅದನ್ನು ತುಂಬಿಸಿಕೊಳ್ಳಲು ಓಡಾಡುತ್ತಿದ್ದಾನೆ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.