ಬೆಂಗಳೂರು: ನಾಳೆ ಸಾಮೂಹಿಕ ನಮಾಜ್ಗೆ ಅವಕಾಶ ನೀಡುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಿದ್ವಿ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಗುರುವಾರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಆರ್.ಅಶೋಕ್ ಅವರು, ಬೆಂಗಳೂರಿನಲ್ಲಿರುವ ಎಲ್ಲಾ ಮಸೀದಿಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದರು. ನಾಳೆ ಯಾರು ಕೂಡ ಮಸೀದಿಗಳಲ್ಲಿ ನಮಾಜ್ ಮಾಡುವುದಿಲ್ಲ, ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡಿಕೊಳ್ಳುತ್ತೇವೆ ಅಂತ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಇನ್ನು ಈಗಾಗಲೇ ವಾಟ್ಸಾಪ್ ಮುಖಾಂತರ ಮೆಸೇಜ್ ಕಳಿಸಿ ಮನೆಯಲ್ಲಿಯೇ ನಮಾಜ್ ಮಾಡುವುದಕ್ಕೆ ಮನವಿ ಮಾಡುತ್ತಿದ್ದಾರೆ. ಈ ದೇಶ ಉಳಿಬೇಕು ಬೆಂಗಳೂರು ಉಳಿಬೇಕು ಅಂದ್ರೆ ಸರ್ಕಾರ ಏನ್ ಕ್ರಮ ಕೈಗೊಳ್ಳುತ್ತೋ ಅದರ ಜೊತೆ ನಾವು ಇರ್ತೇವೆ. ನಮ್ಮೆಲ್ಲ ಸಹಕಾರವನ್ನು ಸರ್ಕಾರಕ್ಕೆ ಕೊಡುತ್ತೇವೆ ಅಂದಿದ್ದಾರೆ ಎಂದು ಅವರು ತಿಳಿಸಿದರು.
ಸದ್ಯ ಕೊರೊನಾವನ್ನು ಹೋಗಲಾಡಿಸಲು ಸೈನಿಕರಂತೆ ಹೋರಾಟ ನಡೆಸುತ್ತೇವೆ ಅಂದಿದ್ದಾರೆ. ಅದ್ರಿಂದ ನಾವು ಎಲ್ಲಾ ಮುಖಂಡರನ್ನು ಸರ್ಕಾರದಿಂದ ಗೌರವಿಸುತ್ತೇವೆ. ಸರ್ಕಾರವೂ ಕೂಡಾ ಎಲ್ಲಾ ಧರ್ಮದವರ ಪರವಾಗಿರುತ್ತೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಈ ಸಭೆಯಲ್ಲಿ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.